ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 38.37 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ.
ಶಿಕ್ಷಣ ಇಲಾಖೆ ಪೌಷ್ಟಿಕಾಂಶದ ಕೊರತೆ ನೀಗಿಸಲು 1ರಿಂದ 8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕಿ ಅಥವಾ ಬಾಳೆ ಹಣ್ಣು ನೀಡುತ್ತಿದೆ. ಮಕ್ಕಳ ಬೇಡಿಕೆಗೆ ಅನುಗುಣವಾಗಿ ಮೂರು ಪದಾರ್ಥ ಗಳಲ್ಲಿ ಅವರು ಬಯಸಿದ್ದನ್ನು
ನೀಡಲು ಎಲ್ಲ ಶಾಲೆಗಳಿಗೂ ಸೂಚಿಸ ಲಾಗಿದೆ.
‘ವಿದ್ಯಾರ್ಥಿಗಳ ಬೇಡಿಕೆ ಕುರಿತು ಅಭಿಪ್ರಾಯ ಸಂಗ್ರಹಿಸಿದಾಗ 47.97 ಲಕ್ಷ ಮಕ್ಕಳಲ್ಲಿ ಶೇ 79.98 ಮಕ್ಕಳು ಬೇಯಿಸಿದ ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. 2.27 ಲಕ್ಷ ಮಕ್ಕಳು ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬೆಳಗಾವಿ ವಿಭಾಗದಲ್ಲೇ ಹೆಚ್ಚಿನ ಮಕ್ಕಳು ಮೊಟ್ಟೆ ಸೇವಿಸಲು ಬಯಸಿದ್ದಾರೆ. ನಂತರ ಕ್ರಮವಾಗಿ ಬೆಂಗಳೂರು, ಕಲಬುರಗಿ ಹಾಗೂ ಮೈಸೂರು ವಿಭಾಗದಲ್ಲಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಮಕ್ಕಳು ಸಾತ್ವಿಕ ಆಹಾರ ಸೇವಿಸುವ ಕುರಿತು ಚರ್ಚೆ, ಪರ–ವಿರೋಧ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲೇ ಮಕ್ಕಳು ಬೇಡಿಕೆ ಸಲ್ಲಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೊಟ್ಟೆ ಸೇವನೆಯ ನಂತರ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿ ರುವುದು ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಲ್ಲಿ ದೃಢಪಟ್ಟಿತ್ತು.
ಮಕ್ಕಳ ಬೇಡಿಕೆಗೆ ಅನುಗುಣವಾಗಿಯೇ ಪೌಷ್ಟಿಕ ಪದಾರ್ಥ ನೀಡುವಂತೆ, ಇಲ್ಲದಿದ್ದರೆ ಕ್ರಮ ಜರುಗಿಸುವುದಾಗಿ ಶಿಕ್ಷಣ ಇಲಾಖೆಯ ಆಯುಕ್ತರು ಈಚೆಗೆ ಸುತ್ತೋಲೆ ಹೊರಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.