ADVERTISEMENT

38ನೇ ಸಮ್ಮೇಳನ: ನರಸಿಂಹನ್‌, ಶ್ರೀನಿವಾಸರಾವ್‌ಗೆ ಇತಿಹಾಸ ಸಂಸ್ಕೃತಿಶ್ರೀ ಪ್ರಶಸ್ತಿ

ನ.9ರಿಂದ ಹಂಪಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ–ಇತರ 11 ಮಂದಿಗೆ ದತ್ತಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 9:33 IST
Last Updated 7 ನವೆಂಬರ್ 2024, 9:33 IST
<div class="paragraphs"><p>ಡಾ.ಹರಿಹರ ಶ್ರೀನಿವಾಸ ರಾವ್</p></div>

ಡಾ.ಹರಿಹರ ಶ್ರೀನಿವಾಸ ರಾವ್

   

ಹೊಸಪೇಟೆ (ವಿಜಯನಗರ): ಕರ್ನಾಟಕ ಇತಿಹಾಸ ಅಕಾಡೆಮಿ ನೀಡುವ ಇತಿಹಾಸ ಸಂಸ್ಕೃತಿಶ್ರೀ ಪ್ರಶಸ್ತಿಗೆ ಪ್ರೊ.ಕೆ.ಆರ್‌.ನರಸಿಂಹನ್ ಮತ್ತು ಡಾ.ಹರಿಹರ ಶ್ರೀನಿವಾಸ ರಾವ್ ಅಯ್ಕೆಯಾಗಿದ್ದಾರೆ. ಜತೆಗೆ ಇತರ 11 ಮಂದಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಅಕಾಡೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಂಪಿ ವಿಶ್ವವಿದ್ಯಾಲಯ ಆವರಣದಲ್ಲಿ ನ.9ರಿಂದ 11ರ ವರೆಗೆ ನಡೆಯಲಿದ್ದು, ಉದ್ಘಾಟನೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇತಿಹಾಸ ಸಂಸ್ಕೃತಿಶ್ರೀ ಪ್ರಶಸ್ತಿ ತಲಾ ₹1 ಲಕ್ಷ ನಗದು ಒಳಗೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ದೇವರಕೊಂಡಾರೆಡ್ಡಿ ಗುರುವಾರ ವಿಶ್ವವಿದ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಇತರ ದತ್ತಿ ಪ್ರಶಸ್ತಿ ಪುರಸ್ಕೃತರು: ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ. ಎಸ್.ಕೆ. ಕೊಪ್ಪ, ನೊಳಂಬಶ್ರೀ ಪ್ರಶಸ್ತಿಗೆ ಬೆಂಗಳೂರಿನ ಟಿ.ವಿ.ನಾಗರಾಜ, ಸಂಶೋಧನಾ ಶ್ರೀ ಪ್ರಶಸ್ತಿಗೆ ಬೆಂಗಳೂರಿನ ಆದಪ್ಪ ಪಾಸೋಡಿ, ನಾಯಕ ಪ್ರಶಸ್ತಿಗೆ ಪುಂಡಿಕಾಯಿ ಗಣಪಯ್ಯ ಭಟ್, ಶ್ರೀಮತಿ ಸುಮಂಗಲ ಪಾಟೀಲ ಮಹಿಳಾ ಪ್ರಶಸ್ತಿಗೆ ಬೆಂಗಳೂರಿನ ಸ್ಮಿತಾ ರೆಡ್ಡಿ, ಸೂರ್ಯಕೀರ್ತಿ ಪ್ರಶಸ್ತಿಗೆ ನಾಗಮಂಗಲದ ಮಹಮದ್ ಕಲೀಂಉಲ್ಲ,  ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ ಪ್ರಶಸ್ತಿಗೆ ಧಾರವಾಡದ ಮಹೇಶ್ ಕುಮಾರ್ ಹ.ಪಾಟೀಲ್‌, ಡಾ. ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ ಪ್ರಶಸ್ತಿಗೆ ಬಾಗಲಕೋಟೆಯ ಯಾದಪ್ಪ ಪರದೇಶಿ, ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಚಿತ್ರದುರ್ಗದ ಸಿ.ಎಂ. ತಿಪ್ಪೇಸ್ವಾಮಿ ಅವರ 'ರಕ್ಕಸದಂಗಡಿ ಕದನ' ಕೃತಿ ಹಾಗೂ ಡಾ. ಎಂ.ಎಚ್. ಕೃಷ್ಣ ಮೆರಿಟ್ ಅವಾರ್ಡ್‌ಗೆ ತುಮಕೂರಿನ ವಿಜ್ಞಾನಿ ಸೋಮಶೇಖರ ಬಿ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದೇವರಕೊಂಡಾರೆಡ್ಡಿ ಮಾಹಿತಿ ನೀಡಿದರು.

ಶಾಸನ ತಜ್ಞ ಹಾಗೂ ಸಂಶೋಧಕ ಆರ್‌.ಶೇಷಶಾಸ್ತ್ರಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಉದ್ಘಾಟಿಸುವರು. ಕಳೆದ ಸಾಲಿನ ಸಮ್ಮೇಳನದ ಸ್ಮರಣ ಸಂಚಿಕೆ ‘ಇತಿಹಾಸ ದರ್ಶನ’ವನ್ನು ಶಾಸಕ ಎಚ್‌.ಆರ್.ಗವಿಯಪ್ಪ ಬಿಡುಗಡೆಗೊಳಿಸುವರು ಎಂದು ಹೇಳಿದರು.

ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಹಂಪಿ ವಿಶ್ವಖ್ಯಾತ ಪ್ರವಾಸಿ ತಾಣವಾಗಿರುವ ಕಾರಣ ಪ್ರವಾಸೋದ್ಯಮ ಸಚಿವಾಲಯದ ₹50 ಲಕ್ಷ ಆರ್ಥಿಕ ನೆರವಿನೊಂದಿಗೆ ಸುಮಾರು 150 ಮಂದಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಸಮ್ಮೇಳನದ ಉದ್ಘಾಟನೆ ಸಮಯದಲ್ಲೇ 90 ದಿನಗಳ ಈ ತರಬೇತಿಗೂ ಚಾಲನೆ ನೀಡಲಾಗುವುದು ಎಂದರು.

ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಲಕ್ಷ್ಮಣ್‌ ತೆಲಗಾವಿ, ಕುಲಸಚವ ಪ್ರೊ.ವಿಜಯ್‌ ಪೂಣಚ್ಚ ತಂಬಂಡ, ಅಧ್ಯಯನಾಂಗದ ನಿರ್ದೇಶಕ ಪ್ರೊ.ಅಮರೇಶ್ ಯತಗಲ್‌, ಪ್ರಾಧ್ಯಾಪಕ ಪ್ರೊ.ಎಸ್‌.ವೈ.ಸೋಮಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.