ಬೆಂಗಳೂರು: ನೇಮಕಾತಿಯಲ್ಲಿ ನಡೆದ ಅಕ್ರಮಗಳ ವಿರುದ್ಧ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ನಡೆಸಿ ಗೆದ್ದು ‘ಅರ್ಹ‘ ಹುದ್ದೆ ಗಿಟ್ಟಿಸಿಕೊಂಡ 40ಕ್ಕೂ ಹೆಚ್ಚು ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳು ಕೆಲಸ ಇಲ್ಲದೆ ಅತಂತ್ರರಾಗಿದ್ದಾರೆ.
1998ನೇ ಸಾಲಿನ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ತೀರ್ಪಿನಂತೆ, ಈ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆಯೇ ಹೊಸ ಹುದ್ದೆಗೆ ನೇಮಕಾತಿ ಆದೇಶ ನೀಡಿದ್ದರೂ ಸ್ಥಳ ನಿಯುಕ್ತಿಗೊಳಿಸದೆ ಸತಾಯಿಸಲಾಗುತ್ತಿದೆ. ಕೋರ್ಟ್ ಮೆಟ್ಟಿಲೇರಿದ ಕಾರಣಕ್ಕೆ ಈ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಅಧಿಕಾರಿಗಳು ಈಗಾಗಲೇ ಇತರ ಇಲಾಖೆಯಲ್ಲಿ 13 ವರ್ಷ ಕೆಲಸ ಮಾಡಿದ್ದಾರೆ. ಆದರೂ, ಹೊಸ ಹುದ್ದೆಯಲ್ಲಿ ಮತ್ತೆ ಎರಡು ವರ್ಷ ಪ್ರೊಬೇಷನರಿ ಅವಧಿ ಪೂರೈಸಬೇಕೆಂದು ಷರತ್ತು ವಿಧಿಸಲಾಗಿದೆ. ಈ ಪೈಕಿ, ಸಹಾಯಕ ಆಯುಕ್ತ ಹುದ್ದೆಗೆ ಸ್ಥಾನ ಪಲ್ಲಟಗೊಂಡು, ಐಎಎಸ್‌ಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ರಾಮಪ್ಪ ಹಟ್ಟಿ ನಿವೃತ್ತರಾಗಲು 10 ತಿಂಗಳು ಮಾತ್ರ ಇದೆ. ಅವರೂ ಪ್ರೊಬೇಷನರಿ ಅವಧಿ ಪೂರೈಸಬೇಕಿದೆ!
ಹೈಕೋರ್ಟ್ ತೀರ್ಪಿನ ಅನ್ವಯ 1998ನೇ ಸಾಲಿನ 115 ಅಧಿಕಾರಿಗಳನ್ನು (ಹಿಂಬಡ್ತಿ, ಮುಂಬಡ್ತಿ) ರಾಜ್ಯ ಸರ್ಕಾರ ಸ್ಥಾನ ಪಲ್ಲಟಗೊಳಿಸಿತ್ತು. ಆ ಎಲ್ಲ ಅಧಿಕಾರಿಗಳ ಹೆಸರುಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ, ಸರ್ಕಾರ ಸುಮಾರು 50 ಅಧಿಕಾರಿಗಳಿಗೆ ಮಾತ್ರ ಈವರೆಗೆ ಹುದ್ದೆ ಬದಲಿಸಿ ನೇಮಕಾತಿ ಆದೇಶ ನೀಡಿದೆ. ಆದರೆ, ಈ ಪೈಕಿ 10 ಅಧಿಕಾರಿಗಳು ಹೊಸ ಇಲಾಖೆಗಳಲ್ಲಿ ಇನ್ನೂ ವರದಿ ಮಾಡಿಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.