ಬೆಂಗಳೂರು: ‘ರಾಜ್ಯ ಸರ್ಕಾರದ ವಿವಿಧ ಭದ್ರತಾ ಯೋಜನೆಗಳನ್ನು ವಿಸ್ತರಿಸುವ ಉದ್ದೇಶದಿಂದ 45 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸಲು ಚಿಂತನೆ ನಡೆದಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಖಾಸಗಿ ಸಾರಿಗೆ ವಲಯದಲ್ಲಿ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು ಮತ್ತು ಮೆಕ್ಯಾನಿಕ್‌ಗಳು ಸೇರಿದಂತೆ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಈ ವರ್ಗಕ್ಕೆ ಉದ್ಯೋಗ ಆಧಾರಿತ ಸಾಮಾಜಿಕ ಭದ್ರತೆ ಪ್ರಯೋಜನಗಳು ಸಿಗುತ್ತಿಲ್ಲ’ ಎಂದರು.
‘ಖಾಸಗಿ ಸಾರಿಗೆ ಉದ್ಯಮವನ್ನೇ ನಂಬಿರುವ ಗಿಗ್ ಕಾರ್ಮಿಕರಿಗೆ ಹೊಸ ವಾಹನ ಖರೀದಿಸುವಾಗ ಶೇ 5ರಷ್ಟು ಸೆಸ್ ವಿನಾಯಿತಿ ನೀಡುವ ಚಿಂತನೆಯಿದೆ. ಮನೆಗಳಿಗೆ ಡೆಲಿವರಿ ಸೇವೆಗಳನ್ನು ಒದಗಿಸುವ ಸ್ವಿಗ್ಗಿ, ಝೊಮೆಟೊ ಮತ್ತಿತರ ವ್ಯವಸ್ಥೆಗಳಡಿ ಸುಮಾರು ನಾಲ್ಕು ಲಕ್ಷ ಜನರು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಉದ್ಯಮದಲ್ಲಿ 20 ಸಾವಿರಕ್ಕೂ ಕೆಲಸಗಾರರಿದ್ದಾರೆ. ಈ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪಿಸಲು, ಉದ್ಯೋಗ ನೀಡುವ ಕಂಪನಿಗಳು ಸೆಸ್ ಪಾವತಿಸುವಂತೆ ಒತ್ತಾಯಿಸಲಾಗುವುದು. ಹೀಗೆ ಸಂಗ್ರಹಿಸಿದ ಮೊತ್ತಕ್ಕೆ ಸರ್ಕಾರದ ಹಣವನ್ನೂ ಹೊಂದಿಸಲಾಗುವುದು’ ಎಂದು ಅವರು ತಿಳಿಸಿದರು.
‘ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಮಿಕರಿಗಾಗಿ 50 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕಾರ್ಮಿಕ ಕಾರ್ಡ್‌ಗಳನ್ನು ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ‘ಈಗಾಗಲೇ 44 ಲಕ್ಷ ಜನರು ಕಾರ್ಮಿಕ ಕಾರ್ಡ್ ಪಡೆದಿದ್ದಾರೆ. ಸುಮಾರು 12 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.
‘ಸೂಕ್ತ ದಾಖಲೆಗಳನ್ನು ಸಲ್ಲಿಸದವರಿಗೂ ಕಾರ್ಮಿಕ ಕಾರ್ಡ್‌ಗಳನ್ನು ನೀಡಲಾಗಿದೆ. ಅಂಥವರಿಗೂ ಸೌಲಭ್ಯ ನೀಡಿದರೆ ಮಂಡಳಿಯ ನಿಧಿ ಖಾಲಿ ಆಗಬಹುದು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 13 ಲಕ್ಷ ಕಾರ್ಮಿಕ ಕಾರ್ಡ್‌ಗಳಿದ್ದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 44 ಲಕ್ಷಕ್ಕೆ ಏರಿಕೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.