ADVERTISEMENT

48 ಲಕ್ಷ ಪಹಣಿಗಳು ಸತ್ತವರ ಹೆಸರಿನಲ್ಲಿ: ಅಧಿಕಾರಿಗಳ ವಿರುದ್ಧ ಸಚಿವ ಬೈರೇಗೌಡ ಗರಂ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:23 IST
Last Updated 22 ಅಕ್ಟೋಬರ್ 2024, 14:23 IST
   

ಮಂಡ್ಯ: ‘ರಾಜ್ಯದಲ್ಲಿ 48 ಲಕ್ಷ ಪಹಣಿಗಳು ಇನ್ನೂ ಸತ್ತವರ ಹೆಸರಿನಲ್ಲಿವೆ. ಕಂದಾಯ ದಾಖಲೆಗಳ ನಿರ್ವಹಣೆ ಅಂದ್ರೆ ಇದೇನಾ? ಪೌತಿ ಖಾತೆಯನ್ನು ಮಾಡಲು ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದೀರಿ? ಈ 48 ಲಕ್ಷ ಜಮೀನುಗಳಿಗೆ ವಾರಸುದಾರರು ಯಾರು?’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸತ್ತವರನ್ನು ಜಮೀನಿನ ಮಾಲೀಕರೆಂದು ಪರಿಗಣಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ಮಂಡ್ಯ ಜಿಲ್ಲೆಯಲ್ಲಿ 2.90 ಲಕ್ಷ ಜಮೀನುಗಳು ಇನ್ನೂ ಸತ್ತವರ ಹೆಸರಿನಲ್ಲೇ ಇವೆ. ಕಂದಾಯ ನಿರೀಕ್ಷಕರು, ಶಿರಸ್ತೇದಾರ್‌, ತಹಶೀಲ್ದಾರ್‌ ಈ ಮೂವರು ಸ್ಥಳ ಮಹಜರು ನಡೆಸಿ, ವಂಶವೃಕ್ಷ ಆಧರಿಸಿ ಪೌತಿ ಖಾತೆ ಮಾಡಿಕೊಡಿ. ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿ ಬರಲಿ. ವಿವಾದವಿದ್ದರೆ ‘ಜಂಟಿ ಖಾತೆ’ಯನ್ನಾದರೂ ಮಾಡಿಕೊಡಿ. ಆಗ ಜಮೀನಿಗೆ ವಾರಸುದಾರರು ಯಾರು ಎಂಬುದು ಲೆಕ್ಕ ಸಿಗುತ್ತದೆ’ ಎಂದರು.

ADVERTISEMENT

‘15 ವರ್ಷಗಳಿಂದ ಕೆರೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಅಳತೆ ಮಾಡಿಕೊಟ್ಟ ನಂತರ ಗ್ರಾಮ ಪಂಚಾಯಿತಿಗಳು ಕೆರೆಯ ಮಾಲೀಕತ್ವ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಒತ್ತುವರಿಯಾಗುತ್ತದೆ. ಹೀಗಾದರೆ, ಇತರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ತೆರವುಗೊಳಿಸುವುದು ಯಾವಾಗ?’ ಎಂದು ಸಚಿವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.