ADVERTISEMENT

ಮುಡಾ | ದೇವೇಗೌಡರ ಕುಟುಂಬಕ್ಕೆ 48 ನಿವೇಶನ ಹಂಚಿಕೆ: ರಮೇಶ್ ಬಾಬು

ಸಭಾಪತಿಗೆ ಮುಡಾ ದಾಖಲೆ ಸಲ್ಲಿಸಿದ್ದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:49 IST
Last Updated 13 ಜುಲೈ 2024, 15:49 IST
ರಮೇಶ್‌ ಬಾಬು
ರಮೇಶ್‌ ಬಾಬು   

ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳನ್ನು ಹಂಚಿಕೆ ಮಾಡಿರುವುದಾಗಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್​. ಯಡಿಯೂರಪ್ಪ ಅವರು 2011ರಲ್ಲಿ ವಿಧಾನ ಪರಿಷತ್‌ ಸಭಾಪತಿಗೆ ದಾಖಲೆಗಳನ್ನು ಸಲ್ಲಿಸಿದ್ದರು’ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹೇಳಿದರು.

ಸುದ್ದಿಗೋಷ್ಠಿ ಶನಿವಾರ ಮಾತನಾಡಿದ ಅವರು, ‘ಮುಡಾ ಹಗರಣಕ್ಕೆ ಯಡಿಯೂರಪ್ಪ ಮಾಡಿದ್ದ ಆರೋಪಗಳು ವಿಧಾನ ಪರಿಷತ್ತಿನ ನಡಾವಳಿಯಲ್ಲಿ ದಾಖಲಾಗಿವೆ’ ಎಂದರು.

‘ಎಚ್.ಡಿ. ಕುಮಾರಸ್ವಾಮಿಗೆ 300x200 ಚ.ಅಡಿ ಅಳತೆಯ (ಸುಮಾರು 60 ಸಾವಿರ ಚದರ ಅಡಿ) ನಿವೇಶನ ಸಂಖ್ಯೆ 17 (ಬಿ), ಅವರ ಕುಟುಂಬದ ಸವಿತಾ ಕೋಂ ಬೀರೇಗೌಡ ಎಂಬುವರಿಗೆ 130x110 ಅಡಿ (ಸುಮಾರು 14,300 ಅಡಿ) ನಿವೇಶನ ಅಕ್ರಮವಾಗಿ ಹಂಚಿಕೆಯ ಕುರಿತು ಯಡಿಯೂರಪ್ಪ ಆರೋಪಿಸಿದ್ದರು’ ಎಂದರು.

ADVERTISEMENT

‘ಯಡಿಯೂರಪ್ಪನವರು ಮಾಡಿದ್ದ ಈ ಆರೋಪಗಳ ಮೇಲೆ ತನಿಖೆಗೆ ಒತ್ತಾಯಿಸುವ ತಾಕತ್ತು ಬಿಜೆಪಿ ನಾಯಕರಿಗೆ ಇದೆಯೇ. ಯಡಿಯೂರಪ್ಪನವರು ದಾಖಲೆಗಳನ್ನು ಸಭಾಪತಿಗೆ ಮಂಡಿಸಿದರೂ ಬಿಜೆಪಿ ಯಾವ ಕಾರಣಕ್ಕೆ ಮೌನವಾಯಿತು’ ಎಂದು ಪ್ರಶ್ನಿಸಿದರು.

‘ಮುಡಾ ಹಗರಣದಲ್ಲಿ ಯಾವ, ಯಾವ ಬಿಜೆಪಿ ನಾಯಕರು ಎಷ್ಟು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹಗರಣಗಳು ನಡೆದಿವೆ’ ಎಂದು ಆರೋಪಿಸಿದರು.

‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ರೂಪದಲ್ಲಿ ಭೂ ಮಾಲೀಕರಿಗೆ ನಿವೇಶನ ನೀಡಿರುವುದನ್ನು ರಾಜಕೀಯ ಕಾರಣಕ್ಕೆ ಬಿಜೆಪಿ ಆರೋಪ ಮಾಡುತ್ತಿದೆ. ಆದರೆ, ಭೂಮಿ‌ ಕಳೆದುಕೊಳ್ಳದೆ ತಮ್ಮ ರಾಜಕೀಯ ಪ್ರಭಾವದ ಮೂಲಕ ಒಂದೇ ಕುಟುಂಬ 48 ನಿವೇಶನಗಳನ್ನು ಪಡೆದುಕೊಂಡ ಅಕ್ರಮ ಕುರಿತು ಬಿಜೆಪಿ ಚಕಾರ ಎತ್ತುವುದಿಲ್ಲ. ಅದೇ ರೀತಿ ಒಬ್ಬನೇ ವ್ಯಕ್ತಿಗೆ ಯಾವ ಆಧಾರದಲ್ಲಿ 60 ಸಾವಿರ ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಸದನದ ಒಳಗೆ ದಾಖಲೆಯಿಟ್ಟು ಮಾತನಾಡಿದ ಯಡಿಯೂರಪ್ಪನವರಿಗೆ ಸಾರ್ವಜನಿಕವಾಗಿ ಮಾತನಾಡಲು ಏಕೆ ಸಾಧ್ಯವಾಗುತ್ತಿಲ್ಲ ’ ಎಂದೂ ಪ್ರಶ್ನಿಸಿದರು.

‘ಬೊಮ್ಮಾಯಿ ಶ್ರೀರಾಮುಲು ಮೇಲೂ ಕೇಸ್ ಹಾಕಬೇಕು’

‘ಅರಸು ಟ್ರಕ್ ಟರ್ಮಿನಲ್‌ನಲ್ಲಿ ನಡೆದ ₹ 50 ಕೋಟಿ ಅಕ್ರಮ ಪ್ರಕರಣದಲ್ಲಿ ಹಿಂದಿನ ಎಂಡಿ ಟರ್ಮಿನಲ್​ನ ಮಾಜಿ ಅಧ್ಯಕ್ಷ ಡಿ.ಎಸ್. ವೀರಯ್ಯ ಅವರನ್ನು ಬಂಧಿಸಲಾಗಿದೆ. ಅಂದು ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರು. ಶ್ರೀರಾಮುಲು ಸಾರಿಗೆ ಸಚಿವರಾಗಿದ್ದರು. ಈ ಅಕ್ರಮದ ಆರೋಪದ ಬಗ್ಗೆ ಎಂಡಿ ಪತ್ರ ಬರೆದಿದ್ದರೂ ಶ್ರೀರಾಮುಲು ಗಮನಹರಿಸಿಲ್ಲ’ ಎಂದು ರಮೇಶ್ ಬಾಬು ಆರೋಪಿಸಿದರು.

‘ನಮ್ಮ ಸರ್ಕಾರ ಬಂದ ನಂತರ ಪ್ರಕರಣ ದಾಖಲಿಸಿ ಸಿಐಡಿಗೆ ವಹಿಸಿದೆ. ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ವೀರಯ್ಯ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಕ್ಷಣೆ ಕೊಟ್ಟಿದ್ದರು.‌ ಅಲ್ಲಿಂದಲೇ ವೀರಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಹೀಗಾಗಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬೊಮ್ಮಾಯಿ ಶ್ರೀರಾಮುಲು ಮೇಲೂ ಪ್ರಕರಣ ದಾಖಲಿಸಬೇಕು’ ಎಂದು‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.