ADVERTISEMENT

ಮೀಸಲಾತಿ ಹೆಚ್ಚಳ ಸೇರಿ 5 ಮಸೂದೆಗಳ ಮಂಡನೆಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 13:39 IST
Last Updated 19 ಡಿಸೆಂಬರ್ 2022, 13:39 IST
ಬೆಳಗಾವಿ ಕಲಾಪ
ಬೆಳಗಾವಿ ಕಲಾಪ   

ಬೆಳಗಾವಿ(ಸುವರ್ಣವಿಧಾನಸೌಧ):ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಶೇ 6 ರಷ್ಟು ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿರುವ ಮಸೂದೆಯೂ ಸೇರಿ ಒಟ್ಟು 5 ಪ್ರಮುಖ ಮಸೂದೆಗಳನ್ನು ವಿಧಾನಸಭೆಯಲ್ಲಿ ಮೊದಲ ವಾರವೇ ಮಂಡಿಸಲು ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಈ ಸಭೆಗೆ ಕಾಂಗ್ರೆಸ್‌ ಪಕ್ಷ ಬಹಿಷ್ಕಾರ ಹಾಕಿತ್ತು. ಜೆಡಿಎಸ್‌ನ ಉಪನಾಯಕ ಬಂಡೆಪ್ಪ ಕಾಶೆಂಪೂರ, ಶಾಸಕರಾದ ಎಚ್‌.ಡಿ.ರೇವಣ್ಣ ಭಾಗವಹಿಸಿದ್ದರು.

‘ಎಲ್ಲ ಮಸೂದೆಗಳ ಕುರಿತು ಸಮಗ್ರ ಚರ್ಚೆ ನಡೆಯಬೇಕು, ಎಲ್ಲ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು. ಸಾಮಾನ್ಯವಾಗಿ ಕೊನೆಯಲ್ಲಿ ಮಸೂದೆಗಳು ಮಂಡನೆ ಆಗುವುದರಿಂದ ಚರ್ಚೆಗೆ ಅವಕಾಶ ಸಿಗದೇ ತರಾತುರಿಯಲ್ಲಿ ಅಂಗೀಕಾರ ಮಾಡಲಾಗುತ್ತಿದೆ’ ಎಂದು ವಿಧಾನಸಭಾಧ್ಯಕ್ಷ ಕಾಗೇರಿ ತಿಳಿಸಿದರು.

ADVERTISEMENT

ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರು ಮಾತನಾಡಿ, ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು. ಪ್ರತಿ ಸಲ ಅಧಿವೇಶನ ನಡೆದಾಗಲೂ ಈ ಭಾಗದ ಸಮಸ್ಯೆಗಳ ಬಗ್ಗೆ ಆದ್ಯತೆ ಸಿಗುತ್ತಿಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಸೂದೆಗಳಲ್ಲದೇ, ಉತ್ತರಕರ್ನಾಟಕ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಚರ್ಚೆಗೆ ಹೆಚ್ಚಿನ ಸಮಯ ನೀಡೋಣ ಎಂದು ಹೇಳಿದರು.

ವಿಧಾನಸಭೆಯಲ್ಲಿ ಗಣ್ಯರ ಭಾವಚಿತ್ರ ಅಳವಡಿಸುವ ವಿಚಾರದಲ್ಲಿ ಸರ್ಕಾರ ಮತ್ತು ವಿಧಾನಸಭಾಧ್ಯಕ್ಷರು ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿ ಕಾಂಗ್ರೆಸ್‌ ನಾಯಕರು ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಿದರು.

ಮಂಡನೆ ಆಗಲಿರುವ ಮಸೂದೆಗಳು:

* 2022 ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು(ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಮಸೂದೆ

*2022 ನೇ ಸಾಲಿನ ಕರ್ನಾಟಕ ಭೂ ಕಂದಾಯ(2 ನೇ ತಿದ್ದುಪಡಿ) ಮಸೂದೆ

*2022 ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ

*2022 ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.