ADVERTISEMENT

ಅಧಿಕಾರಕ್ಕೆ ಬಂದರೆ ಐದು ಸಿಲಿಂಡರ್ ಉಚಿತ: ಎಚ್‌ಡಿಕೆ ಭರವಸೆ

ಆಟೊ ಚಾಲಕರಿಗೆ ಪ್ರತೀ ತಿಂಗಳು ₹ 2,000 ಸಹಾಯಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2023, 19:29 IST
Last Updated 28 ಮಾರ್ಚ್ 2023, 19:29 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ‘ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್‌ ಉಚಿತವಾಗಿ ನೀಡಲಿದ್ದು, ಹತ್ತು ಸಿಲಿಂಡರ್‌ಗಳನ್ನು ಅರ್ಧ ಬೆಲೆಗೆ ನೀಡುವ ಯೋಜನೆ ಜಾರಿಗೊಳಿಸಲಾಗುವುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಎಲ್‌ಪಿಜಿ ಸಿಲಿಂಡರ್‌ ಖರೀದಿಗೆ ಸಬ್ಸಿಡಿ ನೀಡುವುದಾಗಿ ಹೇಳಿ ಉಜ್ವಲ ಯೋಜನೆ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಈಗ ಮಹಿಳೆಯರಿಗೆ ಆಘಾತ ನೀಡಿದೆ. ಸಿಲಿಂಡರ್‌ ಬೆಲೆ ಸಾವಿರ ರೂಪಾಯಿ ದಾಟಿದೆ. ಬಡವರು ಜೀವನ ಸಾಗಿಸುವುದೇ ದುಸ್ತರವಾಗಿದೆ’ ಎಂದರು.

ಆಟೊ ಚಾಲಕರಿಗೆ ಮಾಸಿಕ ₹ 2,000 ಸಹಾಯಧನ ನೀಡುವ ಯೋಜನೆಯನ್ನೂ ಜಾರಿಗೆ ತರಲಾಗು ವುದು. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನೂ ಶಾಶ್ವತವಾಗಿ ಈಡೇರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಜೆಡಿಎಸ್‌ ಈ ಹಿಂದೆ ಪಂಚರತ್ನ ಯೋಜನೆಗಳನ್ನು ಪ್ರಕಟಿಸಿತ್ತು. ಎಲ್ಲ ರೋಗಗಳಿಗೂ ಉಚಿತ ಚಿಕಿತ್ಸೆ, ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ಉಚಿತ ಶಿಕ್ಷಣ, ರೈತರಿಗೆ ದಿನದ 24 ಗಂಟೆಗಳ ಕಾಲ ನಿರಂತರ ಉಚಿತ ವಿದ್ಯುತ್‌ ಪೂರೈಕೆ, ರೈತರಿಗೆ ಪ್ರತೀ ಎಕರೆಗೆ ₹ 10,000 ಸಹಾಯಧನ ನೀಡುವುದು, ಎಲ್ಲರಿಗೂ ವಸತಿ ಸೌಲಭ್ಯ ಹಾಗೂ ಮಹಿಳೆಯರು ಮತ್ತು ಯುವಜನ ಸಬಲೀಕರಣಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಭರವಸೆಗಳನ್ನು ‘ಪಂಚರತ್ನ’ದಲ್ಲಿ ಪ್ರಕಟಿಸಲಾಗಿತ್ತು.

ಕೊಬ್ಬರಿ ಮತ್ತು ಅಡಿಕೆ ಬೆಳೆಗಳ ದರ ಕುಸಿತ ತಡೆಯಲು ವಿಶೇಷ ಯೋಜನೆ ಅನುಷ್ಠಾನಕ್ಕೆ ತರುವುದಾಗಿಯೂ ಕುಮಾರಸ್ವಾಮಿ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.