ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜ ತೀರ್ಥರ ವೃಂದಾವನವನ್ನು ನಿಧಿ ಆಸೆಗೆ ಧ್ವಂಸ ಮಾಡಿದ್ದ ಆಂಧ್ರಪ್ರದೇಶದ ತಾಡಪತ್ರಿಯ ಐವರು ಆರೋಪಿಗಳನ್ನು ಭಾನುವಾರ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ (35), ಡಿ.ಮನೋಹರ (27), ಕೆ.ಕುಮ್ಮಟಕೇಶವ (29), ಬಿ.ವಿಜಯಕುಮಾರ್ (36) ಮತ್ತು ಟಿ.ಬಾಲನರಸಯ್ಯ (42) ಬಂಧಿತರು. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
‘ವ್ಯಾಸರಾಜರು ವಿಜಯನಗರದ ಅರಸರಿಗೆ ರಾಜಗುರುಗಳಾಗಿದ್ದವರು. ಇದನ್ನರಿತ ಆರೋಪಿಗಳು ವೃಂದಾವನವನ್ನು ನಿಧಿ ಆಸೆಗಾಗಿ ಧ್ವಂಸ ಮಾಡಿದರು. ಈ ಹಿಂದೆ ಎರಡು ಬಾರಿ ಸ‍್ಥಳಕ್ಕೆ ಬಂದಿದ್ದ ಅವರು, ಜಾಗದ ಬಗ್ಗೆ ತಿಳಿದುಕೊಂಡು ಹಾರೆ, ಚಾಣ, ಸಲಾಕೆ, ಬುಟ್ಟಿ ಹಾಗೂ ಪಿಕಾಸಿ ಇಟ್ಟಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರೇಣುಕಾ ಕೆ.ಸುಕುಮಾರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೂರನೇ ಬಾರಿ ಹುಣ್ಣಿಮೆ ದಿನ ಇನ್ನೋವಾ ಕಾರಿನಲ್ಲಿ ಕೆಲವರನ್ನು ಕರೆ ತಂದು ವೃಂದಾವನಕ್ಕೆ ಪೂಜೆ ಮಾಡಿದ್ದಾರೆ. ನಂತರ ದುಷ್ಕೃತ್ಯ ಎಸೆಗಿದ್ದಾರೆ’ ಎಂದು ವಿವರಿಸಿದರು.
ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ದುಷ್ಕೃತ್ಯಕ್ಕೆ ಸಂಬಂಧಿಸಿದಂತೆನಿಖರ ಸುಳಿವು ಸಿಗದ ಕಾರಣ ಪೊಲೀಸರು ಮೊಬೈಲ್ ಡೇಟಾ ಮೊರೆ ಹೋದರು. ವಿಶೇಷ ತನಿಖಾ ತಂಡಗಳಿಗೆ ವಿಶೇಷ ಬಹುಮಾನ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.