ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಪ್ರತಿ ವರ್ಷ ಒದಗಿಸುವ ₹5,000 ಕೋಟಿ ವೆಚ್ಚ ಮಾಡಲು ಜುಲೈ 15ರೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ₹5,000 ಕೋಟಿ ನೀಡುವ ಭರವಸೆ ನೀಡಲಾಗಿತ್ತು. ಬಜೆಟ್‌ನಲ್ಲಿಯೂ ಘೋಷಣೆ ಮಾಡಲಾಗಿತ್ತು. ಅದಕ್ಕಾಗಿ ಕ್ರಿಯಾಯೋಜನೆ ರೂಪಿಸಬೇಕು ಎಂದರು.
ಈ ಪ್ರದೇಶಕ್ಕಾಗಿ ನೀಡಿರುವ ಒಟ್ಟು ₹14,228 ಕೋಟಿ ಅನುದಾನದಲ್ಲಿ ₹10,342.90 ಕೋಟಿ ವೆಚ್ಚವಾಗಿದೆ. ₹2,885.90 ಕೋಟಿ ಉಳಿದಿದೆ. ಉಳಿಕೆ ಕಾಮಗಾರಿಗಳ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು. ಬಾಕಿ ಉಳಿದಿರುವ 3,528 ಕಾಮಗಾರಿಗಳನ್ನು ಜುಲೈ ಕೊನೆಯೊಳಗೆ ಆರಂಭಿಸಬೇಕು. ಈಗಾಗಲೇ ಅನುಮೋದನೆಯಾದ ಕಾಮಗಾರಿಗಳಿಗೆ ಟೆಂಡರ್ ಕರೆದಿಲ್ಲವಾದರೆ, ಕೂಡಲೇ ಟೆಂಡರ್ ಕರೆಯಬೇಕು. ಕಾಮಗಾರಿಗಳ ಮೌಲ್ಯಮಾಪನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಕಾಣುವ ರೀತಿಯಲ್ಲಿ ಫಲಿತಾಂಶ ಬರುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದಿದ್ದು, ಈ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆಯೋ ಆ ಕ್ಷೇತ್ರಗಳಿಗೆ ಒತ್ತು ನೀಡಬೇಕು. ಹಾಸ್ಟೆಲ್‌ಗಳು, ಅಂಗನವಾಡಿ ಹಾಗೂ ವಸತಿ ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂದರು.
ಲಭ್ಯ ಅನುದಾನವನ್ನು ಆದ್ಯತೆಯ ಮೇರೆಗೆ ವೆಚ್ಚ ಮಾಡಬೇಕು. ರಸ್ತೆ, ಕುಡಿಯುವ ನೀರು, ನೀರಾವರಿ ಮತ್ತಿತರ ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.ಈ ಪ್ರದೇಶದ ಅಂಗನವಾಡಿಗಳು, ಹಾಸ್ಟೆಲ್‌ಗಳು, ಶಾಲೆಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಯದರ್ಶಿಗಳ ನಡುವೆ ಸಮನ್ವಯ ಇರಬೇಕು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ತಿಳಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿ ಕೊರತೆ ಇದ್ದು, ಶೀಘ್ರವೇ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ, ರಹೀಂ ಖಾನ್, ಈಶ್ವರ ಖಂಡ್ರೆ, ಜಮೀರ್ ಅಹಮದ್ ಖಾನ್, ಶರಣಬಸಪ್ಪ ದರ್ಶನಾಪೂರ, ಎನ್.ಎಸ್.ಬೋಸರಾಜು, ಶಿವರಾಜ್ ತಂಗಡಗಿ, ಡಿ.ಸುಧಾಕರ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.