ADVERTISEMENT

ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ!

ಬೆಂಗಳೂರು– ಮೈಸೂರು ವಿ.ವಿ ವಿಷಯದಲ್ಲಿ ರಾಜ್ಯಪಾಲ– ಸರ್ಕಾರದ ನಡುವೆ ಜಟಾಪಟಿ

ವಿರೂಪಾಕ್ಷ ಹೊಕ್ರಾಣಿ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ!
ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ!   

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟದಿಂದ ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆ ಖಾಲಿ ಉಳಿದಿರುವುದು ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

ರಾಜ್ಯದಲ್ಲಿ ಒಟ್ಟು 26 ವಿಶ್ವವಿದ್ಯಾಲಯಗಳಿದ್ದು, ಮೂರನೇ ಒಂದರಷ್ಟು ಅಂದರೆ ಒಂಬತ್ತು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳೇ ಇಲ್ಲದಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಿವೆ ಎಂದೂ ಹೇಳಲಾಗುತ್ತಿದೆ.

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಕುಲಪತಿ ನೇಮಕ ಸಂಬಂಧ ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ನೇರ ತಿಕ್ಕಾಟ ಇದ್ದರೆ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿರುವುದರಿಂದ ಶಿಫಾರಸು ಪಟ್ಟಿ ಇನ್ನೂ ಸರ್ಕಾರದ ಬಳಿಯೇ ಉಳಿದಿದೆ. ಇನ್ನೂ ಕೆಲವು ವಿಶ್ವವಿದ್ಯಾಲಯಗಳ ಶೋಧನಾ ಸಮಿತಿಗಳು ಕೆಲಸವನ್ನು ಪೂರ್ಣಗೊಳಿಸದ ಕಾರಣ ವಿಳಂಬ ಆಗುತ್ತಿದೆ.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಎಸ್.ಎ. ಪಾಟೀಲ ಮತ್ತು ಮೈಸೂರು ವಿಶ್ವವಿದ್ಯಾಲಯಕ್ಕೆ ಸಿ.ಪಿ. ಸಿದ್ದಾಶ್ರಮ ಅವರನ್ನು ಪರಿಗಣಿಸಬೇಕು ಎಂದು ಸರ್ಕಾರ ರಾಜ್ಯಪಾಲರಿಗೆ ಹೇಳಿತ್ತು. ಈ ಹೆಸರುಗಳು ರಾಜ್ಯಪಾಲರಿಗೆ ಒಪ್ಪಿಗೆ ಆಗದ ಕಾರಣ ತಿರಸ್ಕರಿಸಿದ್ದಾರೆ.

ಅಲ್ಲದೆ, ಹೊಸ ಹೆಸರುಗಳನ್ನು ನೀಡುವಂತೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಸಂಬಂಧಿಸಿದಂತೆ ನೇಮಿಸಿರುವ ಶೋಧನಾ ಸಮಿತಿಗಳು ಮತ್ತೊಮ್ಮೆ ಸಭೆ ಸೇರಿ ಹೊಸ ಹೆಸರುಗಳನ್ನು ಕೊಡಬೇಕಿದೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಪ್ರೊ.ಕೆ. ಚಿನ್ನಪ್ಪಗೌಡ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆ ಖಾಲಿ ಇದೆ. ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಮಲ್ಲಿಕಾ ಘಂಟಿ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿತ್ತು. ಸಮಿತಿ ಸರ್ಕಾರಕ್ಕೆ ಮೂರು ಹೆಸರುಗಳನ್ನು ಶಿಫಾರಸು ಮಾಡಿದೆ. ಅದಿನ್ನೂ ಸರ್ಕಾರದ ಬಳಿಯೇ ಉಳಿದಿದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶೋಧನಾ ಸಮಿತಿ ಆಗಸ್ಟ್‌ 7ರಂದು ಮೂರು ಹೆಸರುಗಳನ್ನು ಶಿಫಾರಸು ಮಾಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಎಸ್. ಸಚ್ಚಿದಾನಂದ, ನಿವೃತ್ತ ನಿರ್ದೇಶಕ ಡಾ.ಎಸ್.ಎಸ್. ಹರಸೂರು ಮತ್ತು ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೃಷ್ಣಮೂರ್ತಿ ಹೆಸರುಗಳನ್ನು ಶಿಫಾರಸು ಮಾಡಿದ್ದು, ಈ ಮೂವರ ಮಧ್ಯೆಯೇ ಪೈಪೋಟಿ ಇರುವುದರಿಂದ ಪಟ್ಟಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ಸ್ಥಾನದ ಆಕಾಂಕ್ಷಿಗಳ ಪೈಕಿ ಮೂರು ಹೆಸರುಗಳನ್ನು ಕಳೆದ ನ.28ರಂದು ಶಿಫಾರಸು ಮಾಡಲಾಗಿದೆ. ಸಾಮಾನ್ಯವಾಗಿ ಶೋಧನಾ ಸಮಿತಿ ಮೂರು ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಆದರೆ, ಹಂಚಿನಾಳ ನೇತೃತ್ವದ ಸಮಿತಿಯು ಐವರ ಹೆಸರುಗಳನ್ನು ಶಿಫಾರಸು ಮಾಡಿದೆ. ಅದಿನ್ನೂ ರಾಜಭವನಕ್ಕೆ ತಲುಪದೆ ಪಶುಸಂಗೋಪನಾ ಇಲಾಖೆಯಲ್ಲೇ ದೂಳು ಹಿಡಿಯುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕಾನೂನು ವಿಶ್ವವಿದ್ಯಾಲಯ ಕುಲಪತಿ ಸ್ಥಾನಕ್ಕೆ ಶಿಫಾರಸ್ಸಾಗಿದ್ದ ಮೂವರು ಹೆಸರುಗಳ  ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಬಳಿಕ ಶೋಧನಾ ಸಮಿತಿ ಎರಡನೇ ಬಾರಿ ಕಳೆದ ಅ.25ರಂದು ಸಭೆ ಸೇರಿ ಮತ್ತೆ ಮೂರು ಹೆಸರುಗಳನ್ನು ಸರ್ಕಾರಕ್ಕೆ ಕಳುಹಿಸಿದೆ. ಇದೂ ಸಹ ನನೆಗುದಿಗೆ ಬಿದ್ದಿದೆ.

ಶೋಧನಾ ಸಮಿತಿಗಳಿಂದ ವಿಳಂಬ: ತುಮಕೂರು ವಿ.ವಿಯ ಕುಲಪತಿ ಆಯ್ಕೆ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾದ ಶೋಧನಾ ಸಮಿತಿ ಡಿ.25ರಂದು ಸಭೆ ನಡೆಸಿತಾದರೂ ಸಮಿತಿ ಸದಸ್ಯರ ಮಧ್ಯದ ಗೊಂದಲದಿಂದ ಕುಲಪತಿ ಹುದ್ದೆಗೆ ಹೆಸರುಗಳನ್ನು ಶಿಫಾರಸು ಮಾಡಲು ಸಾಧ್ಯವಾಗಿಲ್ಲ.

ಪ್ರೊ.ಲಿಂಗೇಗೌಡ, ಪ್ರೊ.ಸಿದ್ದೇಗೌಡ, ಡಾ.ಬಸವರಾಜ ಕಲ್ಗುಡಿ, ಡಾ.ಶರತ್ ಅನಂತಮೂರ್ತಿ, ಡಾ.ಸಂಗಮೇಶ ಪಾಟೀಲ ಮುಂತಾದ ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದಿವೆ. ಇದರಲ್ಲಿ ಬಸವರಾಜ ಕಲ್ಗುಡಿ ಮತ್ತು ಸಂಗಮೇಶ ಪಾಟೀಲ ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸುವಾಗ ವಿವಾದ ಉಂಟಾಗಿ ಸಭೆಯನ್ನೇ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಸಮಿತಿಯು ಕಳೆದ ಡಿ.29ರಂದು ಸಭೆ ಕರೆದಿತ್ತಾದರೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್) ಪ್ರತಿನಿಧಿ ಸಭೆಗೆ ಬಾರದ ಕಾರಣ ಸಭೆ ಮುಂದೂಡಲಾಗಿದೆ.

ನೇಮಕಕ್ಕೆ ಪ್ರಯತ್ನ ನಡೆಯುತ್ತಿದೆ
‘ಉನ್ನತ ಶಿಕ್ಷಣ ಇಲಾಖೆಯ ಐದು ಸೇರಿ ಒಟ್ಟು ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

‘ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಶಿಫಾರಸು ಪಟ್ಟಿಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಶೀಘ್ರದಲ್ಲಿಯೇ ಮತ್ತೊಂದು ಪಟ್ಟಿ ಕಳುಹಿಸಲಾಗುತ್ತದೆ. ಜಾನಪದ ವಿಶ್ವವಿದ್ಯಾಲಯದ ಕುಲಪತಿಗೆ ಹೆಸರುಗಳ ಶಿಫಾರಸು ಪಟ್ಟಿಯನ್ನು ರಾಜಭವಕ್ಕೆ ಕಳುಹಿಸಲಾಗಿದೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಶೋಧನಾ ಸಮಿತಿ ಸಭೆ ನಡೆಸುತ್ತಿದೆ. ದಾವಣಗೆರೆ ವಿಶ್ವವಿದ್ಯಾಲಯದ ಹುದ್ದೆ ಡಿ.31ಕ್ಕೆ ಖಾಲಿಯಾಗಿದ್ದು, ಶೀಘ್ರವೇ ಶೋಧನಾ ಸಮಿತಿ ರಚಿಸಲಾಗುವುದು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.