ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಸೌದಿ ಅರೆಬಿಯಾದಲ್ಲಿರುವ ಅನಿವಾಸಿ ಭಾರತೀಯ ಜಲೀಲ್ ಮುಕ್ರಿ ಅವರು ಬರೆದಿರುವ ‘ಹೆಣ ಬೇಕಾಗಿದೆ’ ಕವನವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸದ್ಯಕ್ಕೆ ರಜೆಯಲ್ಲಿರುವ ಜಲೀಲ್ ಮುಕ್ರಿ, ತಮ್ಮ ಸ್ವಗ್ರಾಮವಾದ ಉಪ್ಪಿನಗಂಡಿಗೆ ಬಂದಿದ್ದಾರೆ. 50 ವರ್ಷದ ಜಲೀಲ್ ಅವರು, ಪ್ರಸಕ್ತ ಕರಾವಳಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಕುರಿತು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. 10ನೇ ವಯಸ್ಸಿನಿಂದಲೇ ಅವರು ಕವನ ಬರೆಯುತ್ತಿದ್ದಾರೆ. ಅವರ ಕವನದಲ್ಲಿರುವ ತೀಕ್ಷ್ಣ ಶಬ್ದಗಳು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.ಹೆಣ ಬೇಕಾಗಿದೆ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಮಾನವ ಹೆಣ ಖಂಡಿತ ಬೇಡ
ಹಿಂದು, ಮುಸ್ಲಿಮ್, ಕ್ರಿಶ್ಚಿಯನ್‌ರ
ಹೆಣ ಬೇಕಾಗಿದೆ
ಅರಮನೆ
ಕಟ್ಟಿಕೊಂಡಿದ್ದೇನೆ
ಮಕ್ಕಳು ಮರಿ
ಮಕ್ಕಳಿಗಾಗುವಷ್ಟು ಕೂಡಿಟ್ಟಿದ್ದೇನೆ
ಮಾನವ ಸಹಜ ಆಸೆ ನನ್ನಲ್ಲಿ ಇನ್ನೂ ಇದೆ ಇನ್ನೂ ಕೂಡಿಡಬೇಕಾಗಿದೆ
ಸಹಕರಿಸಿ ಹೆಣವೊಂದು ಬೇಕಾಗಿದೆ
ಹಿಂದೂ ಮುಸ್ಲಿಮ್
ಅನ್ನು ಕೊಂದ
ಮುಸ್ಲಿಂ ಹಿಂದೂವನ್ನು ಕೊಂದ
ಹೆಣ ಬೇಕಾಗಿದೆ
ಸ್ವಧರ್ಮದವರೇ ಕೊಂದ, ಅತ್ಯಾಚಾರ ಮಾಡಿದ ಹೆಣ ಖಂಡಿತ ಬೇಡ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಬಡವರಿಗೆ ಉಣ್ಣಿಸಲಿಲ್ಲ
ದರಿದ್ರರಿಗೆ ಸೂರಿಲ್ಲ
ಲಂಚ ಭ್ರಷ್ಟಾಚಾರ ನಿಲ್ಲಿಸಲಾಗಲಿಲ್ಲ
ಸುಳ್ಳು ಭರವಸೆ ಪೂರೈಸಲಿಲ್ಲ
ಮತಗಿಟ್ಟಿಸಲು ಬೇರೆ ದಾರಿಯಿಲ್ಲ
ಹೆಣವೊಂದು ಬೇಕಾಗಿದೆ
ಪೂಜಾರಿ, ಬಾಳಿಗ, ಅಶ್ರಫ್
ದಾನಮ್ಮ, ಶರತ್, ದೀಪಕ್
ಬಶೀರ್ ಹೆಣದಲ್ಲಿ
ಒಂದಿಷ್ಟು ಮತ ಸಿಕ್ಕೀತು
ಆದರೂ ಗೆಲ್ಲಲು ಇನ್ನೊಂದಿಷ್ಟು
ಹೆಣಗಳು ಬೇಕಾಗಿದೆ
ಪಕ್ಷ ಪಕ್ಷಗಳ
ಪೈಪೋಟಿಯ ಮಾರುಕಟ್ಟೆಯಲ್ಲಿ
ಹೆಣಗಳು ಹರಾಜಾಗುತ್ತಿವೆ ಬಿಕರಿಯಾಗುತ್ತಿವೆ
ಕೊಂದವರು, ಸತ್ತವರು
ಸಾರಾಸಗಟು ಹರಾಜಾಗುತ್ತಿದ್ದಾರೆ
ಸಹಕರಿಸಿ ಹೆಣ ಬೇಕಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.