ಉಡುಪಿ: ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದ್ವಿತೀಯ ಪರ್ಯಾಯ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮ ಪರ್ಯಾಯ ಯಶಸ್ವಿಯಾಗಿ ಮುಗಿಸಿರುವ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಇದೇ 17ರಂದು ಸಂಜೆ 7 ಗಂಟೆಗೆ ರಥಬೀದಿ ಪರವಿದ್ಯಾ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಸಚಿವ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರದ್ಲಾಂಜೆ, ಪಿ.ಜಿ.ಆರ್. ಸಿಂಧ್ಯಾ, ಮಾಜಿ ಶಾಸಕ ರಘುಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾಗವಹಿಸಲಿದ್ದಾರೆ. ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ರಾತ್ರಿ ಕೂಡ ಅನ್ನ ಸಂತರ್ಪಣೆ ಜರುಗಲಿದೆ’ ಎಂದರು.
ಇದೇ 18ರಂದು ಬೆಳಿಗ್ಗೆ 3 ಗಂಟೆಗೆ ಸರಿಯಾಗಿ ಜೋಡುಕಟ್ಟೆಯಿಂದ ಮಠದ ಪಟ್ಟದ ದೇವರು ಹಾಗೂ ಅಷ್ಟಮಠಾಧೀಶರೊಂದಿಗೆ ವಿದ್ವಾಂಸ, ಗಣ್ಯರು ವೇದಘೋಷರೊಂದಿಗೆ ಕವಿ ಮುದ್ದಣ ಮಾರ್ಗವಾಗಿ ಸಾಗಿ, ಕನಕದಾಸ ರಸ್ತೆಯ ಮೂಲಕ ಪರ್ಯಾಯೋತ್ಸವದ ಮೆರವಣಿಗೆ ರಥಬೀದಿಗೆ ತಲುಪಲಿದೆ. ಈ ಸಂದರ್ಭದಲ್ಲಿ ಎರಡು ಬದಿ ಮಾರ್ಗದಲ್ಲಿ ಜಿಲ್ಲಾಧಿಕಾರಿ ಝೀರೋ ಟ್ರಾಫಿಕ್ ವ್ಯವಸ್ಥೆಗೆ ಆದೇಶ ನೀಡಿದ್ದಾರೆ.
ಬೆಳಿಗ್ಗೆ 6.35ಕ್ಕೆ ವಿದ್ಯಾಧೀಶ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ನಂತರ ರಾಜಾಂಗಣದಲ್ಲಿ ದರ್ಬಾರ್‌ನಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಪರ್ಯಾಯ ಪ್ರಥಮ ಮಹಾಪೂಜೆಯನ್ನು ನೆರವೇರಿಸಲಿದ್ದಾರೆ. ಸಂಜೆ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಪಿ.ಜಿ.ಆರ್.ಸಿಂಧ್ಯ ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.