ADVERTISEMENT

ಸರ್ವಜ್ಞ ಪೀಠಾಹೋರಣ ಮಾಡಿದ ವಿದ್ಯಾಧೀಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ಆರಂಭಕ್ಕೂ– ಅಂತ್ಯಕ್ಕೂ ಇರಲೊಂದು ನಗು... ಪಂಚಮ ಪರ್ಯಾಯ ಕೊನೆಗೊಳಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ದ್ವಿತೀಯ ಬಾರಿಗೆ ಪರ್ಯಾಯ ಪೀಠ ಏರಿದ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಸನ್ಮಾನ ಸಮಾರಂಭದಲ್ಲಿ ಮಂದಸ್ಮಿತರಾಗಿ ಉಭಯಕುಶಲೋಪರಿಯಲ್ಲಿ ತೊಡಗಿದ್ದರು. ಹಾಲಿ ಪೀಠಾಧಿಪತಿಗಳು ನಿರ್ಗಮಿತ ಸ್ವಾಮೀಜಿ ಅವರಿಗೆ ಸನ್ಮಾನಿಸಿ ಬೀಳ್ಕೊಡುವುದು ಸಂಪ್ರದಾಯ.  ಪ್ರಜಾವಾಣಿ ಚಿತ್ರ/ ಉಮೇಶ್ ಮಾರ್ಪಳ್ಳಿ
ಆರಂಭಕ್ಕೂ– ಅಂತ್ಯಕ್ಕೂ ಇರಲೊಂದು ನಗು... ಪಂಚಮ ಪರ್ಯಾಯ ಕೊನೆಗೊಳಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ದ್ವಿತೀಯ ಬಾರಿಗೆ ಪರ್ಯಾಯ ಪೀಠ ಏರಿದ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಸನ್ಮಾನ ಸಮಾರಂಭದಲ್ಲಿ ಮಂದಸ್ಮಿತರಾಗಿ ಉಭಯಕುಶಲೋಪರಿಯಲ್ಲಿ ತೊಡಗಿದ್ದರು. ಹಾಲಿ ಪೀಠಾಧಿಪತಿಗಳು ನಿರ್ಗಮಿತ ಸ್ವಾಮೀಜಿ ಅವರಿಗೆ ಸನ್ಮಾನಿಸಿ ಬೀಳ್ಕೊಡುವುದು ಸಂಪ್ರದಾಯ. ಪ್ರಜಾವಾಣಿ ಚಿತ್ರ/ ಉಮೇಶ್ ಮಾರ್ಪಳ್ಳಿ   

ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವುದರೊಂದಿಗೆ ಪಲಿಮಾರು ಪರ್ಯಾಯ ವಿದ್ಯುಕ್ತವಾಗಿ ಆರಂಭವಾಯಿತು. ಭಕ್ತಿ– ಭಾವ, ಅಭಿಮಾನ ತುಂಬಿದ ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ‌ ಇಲ್ಲಿನ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು. ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಅವರನ್ನು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು.

ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಅವರು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಇನ್ನು ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ.

ADVERTISEMENT

ದೀಪದ ಬೆಳಕು, ಭಕ್ತಿಯ ಹೊಳಪು:
ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸುವುದು ರೂಢಿ. ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ಸ್ವಾಮೀಜಿ ಅವರ ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ವಿದ್ಯುತ್ ದೀಪದ ಸರದಿಂದ ಅಲಂಕರಿಸಲಾಗಿತ್ತು. ವಾಣಿಜ್ಯ ಮಳಿಗೆಯ ಮಾಲೀಕರು ತಮ್ಮ ಅಂಗಡಿಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದರಿಂದ ಇಡೀ ನಗರವೇ ಹೊಳೆಯುತ್ತಿರುವಂತೆ ಭಾಸವಾಯಿತು.

60ಕ್ಕೂ ಹೆಚ್ಚು ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವೇದಘೋಷ, ಭಜನಾ ತಂಡ, ಚೆಂಡೆ, ಬ್ಯಾಂಡ್‌ಸೆಟ್‌, ಕುಂಭಾಶಿ ಡೋಲು. ಪಂಚವಾದ್ಯ ಹಾಗೂ ವಿವಿಧ ಬ್ಯಾಂಡ್‌ಸೆಟ್‌ ತಂಡಗಳು ಹೊಮ್ಮಿಸಿದ ನಾದ ಕಿವಿಗಡಚಿಕ್ಕುವಂತಿತ್ತು. ವಿವಿಧ ಬಿರುದಾವಳಿ, ತಟ್ಟೀರಾಯ, ಹೋಳಿ ಕುಣಿತ, ಡೊಳ್ಳು ಕುಣಿತ. ವೀರಗಾಸೆ ಕರಗ ಕೋಲಾಟ, ಸೋಮನ ಕುಣಿತ ತಂಡಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದವು. ತಾಲೀಮು ತಂಡಗಳ ಕಸರತ್ತು ಹುಬ್ಬೇರುವಂತೆ ಮಾಡಿತು. ಹತ್ತಾರು ಸಂಘ– ಸಂಸ್ಥೆಗಳು ನಗರದ ಪ್ರಮುಖ ಬೀದಿಗಳಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.