ADVERTISEMENT

ಲಂಟಾನ ನಿಯಂತ್ರಣಕ್ಕೆ ಕೀಟದ ಮೊರೆ

ಅಮಿತ್ ಎಂ.ಎಸ್.
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಲಂಟಾನ ನಿಯಂತ್ರಣಕ್ಕೆ ಕೀಟದ ಮೊರೆ
ಲಂಟಾನ ನಿಯಂತ್ರಣಕ್ಕೆ ಕೀಟದ ಮೊರೆ   

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವ್ಯಾಪಕವಾಗಿ ಬೆಳೆದಿರುವ ಲಂಟಾನ ಕಳೆ ಗಿಡಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ, ‘ಲಂಟಾನ ಲೇಸ್‌ ಬಗ್‌’ ಕೀಟಗಳನ್ನು ಪ್ರಯೋಗಿಸಲು ನಿರ್ಧರಿಸಿದೆ.

ಅರಣ್ಯ ಪ್ರದೇಶದಲ್ಲಿನ ಲಂಟಾನ ಗಿಡಗಳ ಮೇಲೆ ಪ್ರಯೋಗಿಸುವ ಸಲುವಾಗಿ, ಈ ಕೀಟಗಳಿಂದ ಉಂಟಾಗುವ ಸಾಧಕ–ಬಾಧಕಗಳನ್ನು ತಿಳಿದುಕೊಳ್ಳಲು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ತಜ್ಞರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಲಂಟಾನ ನಿರ್ಮೂಲನೆಗೆ ಅಗತ್ಯವಿರುವಷ್ಟು ಕೀಟಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ.

ವೈವಿಧ್ಯಮಯ ಬಣ್ಣದ ಹೂವುಗಳನ್ನು ಬಿಡುವ ಲಂಟಾನ ಬಲು ಆಕರ್ಷಕವಾಗಿ ಕಾಣಿಸುತ್ತದೆ. ಆದರೆ, ಈ ಗಿಡದಿಂದ  ಅರಣ್ಯದಲ್ಲಿ ಇತರ ಸಸ್ಯ ಸಂಪತ್ತಿನ ಸಹಜ ಬೆಳವಣಿಗೆ, ಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ, ಕಾಳ್ಗಿಚ್ಚು ವ್ಯಾಪಕವಾಗಿ ಹರಡಲು ಇದು ಸಹಕಾರಿಯಾಗಿದೆ. ಮಾನವ ಶಕ್ತಿ ಬಳಸಿ ಈ ಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಅಸಾಧ್ಯ. ಹೀಗಾಗಿ, ಇವುಗಳ ತೆರವಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅರಣ್ಯ ಇಲಾಖೆ ಮುಂದಾಗಿದೆ.

ADVERTISEMENT

‘ಈ ಕೀಟಗಳು ಲಂಟಾನದ ಎಲೆಗಳನ್ನು ಭಕ್ಷಿಸಿ ಗಿಡದ ಸಾವಿಗೆ ಕಾರಣವಾಗುತ್ತವೆ. ಇದರಿಂದ ಬೇರೆ ಸಸ್ಯಗಳಿಗೆ ಅಪಾಯವಾಗುತ್ತದೆಯೇ, ಅವುಗಳ ಸಂತತಿ ಹೆಚ್ಚಾದರೆ ನಿಯಂತ್ರಿಸುವುದು ಹೇಗೆ ಮುಂತಾದ ಅಂಶಗಳನ್ನು ಅರಿತುಕೊಳ್ಳಲು ಕೃಷಿ ವಿ.ವಿ ಸಂಶೋಧಕರ ನೆರವಿನಿಂದ ತಿಳಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 1,000 ಎಕರೆಯಷ್ಟು ಲಂಟಾನ ಈಗಾಗಲೇ ಕಾಯಿಲೆಗೆ ತುತ್ತಾಗಿ ಸಂಪೂರ್ಣ ಒಣಗಿ ಹೋಗಿದೆ. ಅದಕ್ಕೆ ಈ ಕೀಟಗಳೇ ಕಾರಣ ಎನ್ನುತ್ತಾರೆ ಅವರು.

ನಿಸರ್ಗದತ್ತ ಮದ್ದು: ದಕ್ಷಿಣ ಅಮೆರಿಕದ ಲಂಟಾನ ಲೇಸ್‌ ಬಗ್‌ಅನ್ನು ಲಂಟಾನ ಕಳೆಯ ಜೈವಿಕ ನಿಯಂತ್ರಣಕ್ಕಾಗಿ ಅನೇಕ ದೇಶಗಳಲ್ಲಿ ಪ್ರಯೋಗಿಸಲಾಗಿದೆ. ಭಾರತಕ್ಕೆ 200 ವರ್ಷಗಳ ಹಿಂದೆಯೇ ಬ್ರಿಟಿಷರು ಈ ಕೀಟವನ್ನು ತಂದಿದ್ದರು ಎನ್ನಲಾಗಿದೆ. ಇದರಿಂದ ಅರಣ್ಯದ ಇತರೆ ಸಸ್ಯ ಸಂಪತ್ತಿಗೆ ತೊಂದರೆಯಾಗುವುದಿಲ್ಲ ಎನ್ನಲಾಗಿದ್ದರೂ, ಅದರ ಅಪಾಯದ ಸಾಧ್ಯತೆಗಳನ್ನು ತಿಳಿದುಕೊಂಡ ಬಳಿಕ ವ್ಯಾಪಕ ಪ್ರಯೋಗಕ್ಕೆ ಅರಣ್ಯ ಇಲಾಖೆ ನಿರ್ಧರಿಸಿದೆ.

* ಲಂಟಾನ ಲೇಸ್‌ ಬಗ್‌ಗಳು ಎಲ್ಲ ಗಿಡಗಳನ್ನೂ ತಿನ್ನುವುದಿಲ್ಲ. ಆದರೂ, ಅವುಗಳ ಕುರಿತು ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ.

- ಅಂಬಾಡಿ ಮಾಧವ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ
          

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.