ADVERTISEMENT

ಯೋಗರಾಜ, ಯಶವಂತ ಜುಗಲಬಂದಿ

ರವಿ ಕುಲಕರ್ಣಿ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಯೋಗರಾಜ, ಯಶವಂತ ಜುಗಲಬಂದಿ
ಯೋಗರಾಜ, ಯಶವಂತ ಜುಗಲಬಂದಿ   

ಧಾರವಾಡ: ಮಾತಿಗೆ ಮಾತು, ಪನ್‌ಗೆ ಪನ್‌, ಮಧ್ಯೆ ಮಧ್ಯೆ ಹಾಸ್ಯ ಚಟಾಕಿ – ಇದೆಲ್ಲದರ ಜೊತೆಗೆ ಸಿನಿಮಾ ಬದುಕಿನ ಹಲವು ಮಗ್ಗುಲುಗಳನ್ನು ತೆರೆದಿಡುವಲ್ಲಿ ನಿರ್ದೇಶಕ ಯೋಗರಾಜ ಭಟ್‌ ಮತ್ತು ನಟ–ನಿರ್ದೇಶಕ ಯಶವಂತ ಸರದೇಶಪಾಂಡೆ ನಡುವಿನ ಜುಗಲಬಂದಿ  ಯಶಸ್ವಿಯಾಯಿತು.

ಸಾಹಿತ್ಯ ಸಂಭ್ರಮದ ಎರಡನೇ ದಿನ ನಡೆದ 10ನೇ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಯೋಗರಾಜ ಭಟ್‌, ಬಯಲು ಸೀಮೆಯ ಹುಡು
ಗನೊಬ್ಬ ಬೆಂಗಳೂರಿನ ಮಾಯಾಲೋಕದಲ್ಲಿ ಬೇರು ಬಿಟ್ಟಿದ್ದನ್ನು, ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋದುದನ್ನು ನೆನಪಿಸಿಕೊಂಡರು. ಸಿನಿಮಾ ಕಥೆಯೊಂದು ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದನ್ನು ವೇದಿಕೆಯಲ್ಲಿಯೇ ತೋರಿಸಿಕೊಟ್ಟರು. ಅಲ್ಲದೇ ಆ ಕಥೆ ಸಿನಿಮಾ ಆದರೆ ಅದರಲ್ಲಿ ಗೀತೆಯೊಂದು ಹೇಗೆ ಸೇರಿಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ವೇದಿಕೆಯಲ್ಲಿಯೇ ಗೀತೆಯೊಂದನ್ನು ರಚಿಸಿ ಓದಿದರು.

ನಿಮ್ಮ ಸಿನಿಮಾದಲ್ಲಿ ಕಥೆ ಇರುವುದೇ ಇಲ್ಲ ಎನ್ನುವ ಆರೋಪವಿದೆ ಎಂದು ಯೋಗರಾಜ ಭಟ್‌ ಅವರ ಕಾಲೆಳೆಯುವ ಪ್ರಯತ್ನವನ್ನು ಸರದೇಶಪಾಂಡೆ ಮಾಡಿದರು. ಇದಕ್ಕೆ ಉತ್ತರಿಸಿದ ಭಟ್, ‘ನನಗೂ ಒಮ್ಮೊಮ್ಮೆ ಹಾಗನಿಸಿದೆ. ಆದರೆ ಕಥೆ ಇಲ್ಲದಿದ್ದರೂ, ಕಥನ ಇರುತ್ತದೆ. ಬಹಳಷ್ಟು ಸಂದರ್ಭದಲ್ಲಿ ನನ್ನ ಸಿನಿಮಾ ನೋಡಿದವರು ಇದರಾಗೇನೈತಿ ಅನ್ನುತ್ತಾರೆ. ಅದರೆ ಅದರಲ್ಲಿ ರಸಗ್ರಹಣವಿರುತ್ತದೆ. ಸಿನಿಮಾ, ನಾಟಕದ ರಚನೆ ಸರಳವಲ್ಲ. ಅದಕ್ಕೆ ವಿಶೇಷವಾಗಿ ಯೋಚಿಸುವ ಶಕ್ತಿ ಬೇಕಾಗುತ್ತದೆ. ಕಾದಂಬರಿ ಆಧರಿಸಿ ಸಿನಿಮಾ ಮಾಡುವಾಗ ಅಲ್ಲೊಂದು ವಸ್ತು ಇರುತ್ತದೆ. ಆದರೆ ಅದು ಅಪೂರ್ಣ, ಅದನ್ನು ಕಟ್ಟುವ ಕೌಶಲ ಸಿನಿಮಾ ಮಾಡುವಾಗ ಅಗತ್ಯವಾಗಿ ಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

ADVERTISEMENT

‘ನಾನು ಮಾಡಿರುವ ಸಿನಿಮಾಗಳು ಶ್ರೇಷ್ಠ ಎನ್ನುವ ಭ್ರಮೆ ನನಗಿಲ್ಲ. ಹಾವೇರಿ ಜಿಲ್ಲೆ ತಿಳವಳ್ಳಿಯಲ್ಲಿ ಚಹಾದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ನೇರ ಬೆಂಗಳೂರಿಗೆ ಹೋದೆ. ಏನು ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಹಲವು ಬಾರಿ ಬೆಂಗಳೂರು ಸಹವಾಸ ಬೇಡ ಎಂದು ಊರಿಗೆ ಹಿಂತಿರುಗಿದ್ದಿದೆ. ಆದರೆ ಏನಾದರೂ ಮಾಡಬೇಕು ಎನ್ನುವ ಸೆಳೆತದಿಂದಾಗಿ ಬೆಂಗಳೂರಿನಲ್ಲಿ ನೆಲೆ ನಿಂತೆ. ಅಲ್ಲಿಯೇ ಬೇರು ಬಿಟ್ಟೆ. ಒಮ್ಮೆ ಬೇರು ಇಳಿದ ಮೇಲೆ ಟೊಂಗೆ ಹರಡುವುದು ಕಷ್ಟವಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

‘ನೀವು ಚಹಾ ಮಾರುತ್ತಿದ್ದಿರಾ? ಹಾಗಾದರೆ ನಿಮಗೂ ಪ್ರಧಾನಿಯಾಗುವ ಅವಕಾಶವಿದೆ’ ಎಂದು ಸರದೇಶಪಾಂಡೆ ಹೇಳಿದಾಗ ಸಭಾಭವನದಲ್ಲಿ ನಗೆಯ ಅಲೆಗಳು ಹರಡಿದವು.

‘ಸಿನಿಮಾ ರಂಗದಲ್ಲಿ ಛಾಯಾಗ್ರಾಹಕನಾಗಬೇಕು ಎಂದು ಬಂದೆ. ಯಾಕೋ ಒಗ್ಗಲಿಲ್ಲ. ಅಲ್ಲಿಂದ ಕಂಠದಾನ ಕಲಾವಿದನಾಗಿ ಕೆಲಸ ಮಾಡಿದೆ. ನಂತರ ನಿರ್ದೇಶನ ಮಾಡಿದೆ. ಯಾವುದೇ ಕೆಲಸವನ್ನು ಮಾಡಬೇಕಾದರೂ ಸರಿಯಾಗಿ ಮಾಡಬೇಕು. ನಾನು ಹಾಗೆ ಮಾಡಬೇಕು ಎಂದರೆ ನನ್ನನ್ನು ರೊಚ್ಚಿಗೆಬ್ಬಿಸಬೇಕು’ ಎಂದು ಲಘು ಹಾಸ್ಯ ಧಾಟಿಯಲ್ಲಿ ಭಟ್ ಹೇಳಿದರು.

ಹಾಡುಗಳಲ್ಲಿ ಏನಾದರೂ ತತ್ವಜ್ಞಾನ ಇದೆಯೇ? ಅದನ್ನು ಹುಡುಕುವುದು ಹೇಗೆ? ಹಳೆ ಪಾತ್ರೆ, ಹಳೆ ಕಬ್ಬಿಣ ಹಾಗೂ ಕರಡಿಗೆ ಜಾಮೂನು ತಿನಿಸಬಾರದು ಎನ್ನುವ ಗೀತೆಗಳಲ್ಲಿ ಇರುವ ಸಂದೇಶ ಏನು? ಎನ್ನುವ ಪ್ರಶ್ನೆಗಳಿಗೆ – ‘ಯಾರು ನನ್ನ ವ್ಯಂಗ್ಯ, ವಿಡಂಬನೆಯನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರು ನನ್ನನ್ನು ಪ್ರೀತಿಸುತ್ತಾರೆ. ಯಾರು ನನ್ನ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ದ್ವೇಷಿಸುವದು ಸಹಜ’ ಎಂದರು.

’ಕಥೆ, ಕವನ ಬರೆದರೆ ನಾವೆಷ್ಟು ದಡ್ಡರು ಅನ್ನೋದು ಮನೀಯವರಿಗೆ ಗೊತ್ತಾಗ್ತದ. ಸಿನಿಮಾ ಮಾಡಿದರೆ ನಮ್ಮ ದಡ್ಡತನ ಊರಾಗಿನವರಿಗೆಲ್ಲ ಗೊತ್ತಾಗ್ತದ. ಅದಕ್ಕ ಸಿನೆಮಾ ಬೆನ್ನು ಬಿದ್ದೀನಿ’ ಎಂದು ‘ನೀವೇಕೆ ಸಿನಿಮಾ ಮಾಡುತ್ತೀರಿ ಪ್ರಶ್ನೆಗೆ’ ಎಂದುತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.