ADVERTISEMENT

ಗುತ್ತಿಗೆದಾರರೇ ನೀತಿ ನಿರ್ಣಾಯಕರು: ಉಲ್ಲಾಸ್

ಜೀವವೈವಿಧ್ಯಗಳನ್ನು ಕಟ್ಟುವುದು ಸಾಧ್ಯವಿಲ್ಲ

ಪದ್ಮನಾಭ ಭಟ್ಟ‌
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಸಾಹಿತ್ಯ ಸಂಭ್ರಮದಲ್ಲಿ ಉಲ್ಲಾಸ ಕಾರಂತ
ಸಾಹಿತ್ಯ ಸಂಭ್ರಮದಲ್ಲಿ ಉಲ್ಲಾಸ ಕಾರಂತ   

ಧಾರವಾಡ: ‘ನಾವಿಂದು ಅವಶ್ಯಕತೆ ಇಲ್ಲದೆಯೂ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿದ್ದೇವೆ. ಅದು ಸರಿಯಲ್ಲ. ನಮ್ಮಲ್ಲಿ ಆರ್ಥಿಕ ವಿಶ್ಲೇಷಣೆಯಾಗಲಿ, ಪರಿಸರ ವಿಶ್ಲೇಷಣೆಯಾಗಲಿ ಇಲ್ಲವೇ ಇಲ್ಲ. ಎಲ್ಲವನ್ನೂ ಗುತ್ತಿಗೆದಾರರೇ ನಿರ್ಧರಿಸುತ್ತಿದ್ದಾರೆ’ ಎಂದು ಪರಿಸರ ತಜ್ಞ ಕೆ. ಉಲ್ಲಾಸ ಕಾರಂತ ವಿಷಾದ ವ್ಯಕ್ತಪಡಿಸಿದರು.

ತಮ್ಮ ಮಾತಿನ ಸಮರ್ಥ ನೆಗಾಗಿ ಶಿರಾಡಿ ಘಾಟ್‌ ರಸ್ತೆ ಯೋಜನೆಯನ್ನು ಬಳಸಿಕೊಂಡ ಅವರು, ‘ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಶಿರಾಡಿಘಾಟ್ ಮುಖ್ಯರಸ್ತೆಯಿದೆ. ಅದು ಬೇಕೇಬೇಕು. ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿ ಅದನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ ಜಪಾನೀಸ್‌ ಡೆವಲೆಪ್‌ಮೆಂಟ್‌ ಏಜೆನ್ಸಿ (ಜೀಕಾ) ಜತೆಗೆ ಒಪ್ಪಂದ ಮಾಡಿಕೊಂಡು ಈ ರಸ್ತೆಯ ಬದಲು ಸುರಂಗ ಮಾಡುವ ಯೋಜನೆಯೂ ಪ್ರಸ್ತಾವನೆಯಲ್ಲಿದೆ. ಜೀಕಾದ ಒಂದು ನಕ್ಷೆಯ ಪ್ರಕಾರ ಈಗಿರುವ ರಸ್ತೆಯ ನಾಲ್ಕೈದು ಕಿ.ಮೀ. ದೂರದಲ್ಲಿಯೇ ಸುರಂಗ ಬರುತ್ತದೆ. ಅದೇ ಸಮಯದಲ್ಲಿ ಧರ್ಮಸ್ಥಳದ ಶಿಶಿಲದಿಂದ ಭೈರಾಪುರಕ್ಕೆ ಏಳೂನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೊಂದು ರಸ್ತೆ ರೂಪಿಸಲಾಗುತ್ತಿದೆ. ಹತ್ತು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮೂರು ಹೆದ್ದಾರಿಯ ಅವಶ್ಯಕತೆ ಇದೆಯಾ? ಯಾವುದೇ ಆರ್ಥಿಕ ಮಾನದಂಡಗಳೂ ಇವನ್ನು ಸಮರ್ಥಿಸುವುದಿಲ್ಲ. ಸರ್ಕಾರದ ಬಳಿ ಹಣ ಇದೆ ಎಂದು ಖರ್ಚು ಮಾಡುತ್ತಿದ್ದೇವೆ. ಆ ಹಣಕ್ಕಾಗಿ ಲಾಬಿಗಳು ನಡೆಯುತ್ತಿವೆ’ ಎಂದು ಟೀಕಿಸಿದರು.

ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ದಿನದ ‘ಅಭಿವೃದ್ಧಿ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ’ ಎಂಬ ವಿಷಯದ ಕುರಿತಾದ ಗೋಷ್ಠಿ
ಯಲ್ಲಿ ಭಾಗವಹಿಸಿ ಮಾತನಾಡಿದರು.

ADVERTISEMENT

‘ಪರಿಸರ ಚಳವಳಿಗಳು ಮನುಷ್ಯ ಕೇಂದ್ರಿತವಾಗಿರುತ್ತದೆ. ಮನುಷ್ಯನ ಅನುಕೂಲಕ್ಕಾಗಿ ಪರಿಸರ ರಕ್ಷಿಸಬೇಕು ಎಂಬುದು ಈ ಚಳವಳಿಗಳ ಉದ್ದೇಶವಾಗಿರುತ್ತದೆ. ಪ್ರಾಣಿ ಪ್ರೇಮ ಎನ್ನುವುದೂ ಯಾವುದೋ ಒಂದು ಪ್ರಾಣಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ವನ್ಯಸಂರಕ್ಷಣೆ ಎನ್ನುವುದು ಇವೆರಡಕ್ಕಿಂತ ಭಿನ್ನವಾದದ್ದು. ಅದು ಮನುಷ್ಯಕೇಂದ್ರಿತ ಅಲ್ಲ. ಪರಿಸರದಲ್ಲಿ ಮನುಷ್ಯನಂತೆಯೇ ಉಳಿದ ಎಲ್ಲ ಪ್ರಾಣಿಗಳೂ ರಕ್ಷಿತಗೊಳ್ಳಬೇಕು ಎನ್ನುವ ಉದ್ದೇಶ ಹೊಂದಿರುವಂಥದ್ದು’ ಎಂದು ಅವರು ವಿವರಿಸಿದರು.

ವನ್ಯಸಂರಕ್ಷಣೆಯ ಕುರಿತಾಗಿ ನಮ್ಮಲ್ಲಿರುವ ಅವಜ್ಞೆಯ ಕುರಿತು ಗಮನ ಸೆಳೆದ ಅವರು ‘ನಾವು ನಮ್ಮಶಿಲ್ಪಕಲೆ, ನೃತ್ಯಕಲೆ, ಸಾಹಿತ್ಯ ಎಲ್ಲದರ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮಲ್ಲಿನ ಅಗಾಧ ಜೀವವೈವಿಧ್ಯದ ಬಗ್ಗೆ ನಮಗೆ ಯಾವುದೇ ಹೆಮ್ಮೆ ಇಲ್ಲ. ತಾಜ್‌ಮಹಲ್‌ ಕೆಡವಿದರೆ ನೀಲಿನಕ್ಷೆ ಇಟ್ಟುಕೊಂಡು ಮತ್ತೆ ಕಟ್ಟಬಹುದು. ಅದನ್ನು ನಾವು ಕಾಳಜಿಯಿಂದ ರಕ್ಷಿಸುತ್ತೇವೆ. ಆದರೆ ಮತ್ತೆಂದೂ ಕಟ್ಟಲಾಗದ ಜೀವವೈವಿಧ್ಯದ ಕುಸಿತದ ಬಗ್ಗೆ ನಮಗೆ ಯಾವುದೇ ಕಾಳಜಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘‘ನಮ್ಮಲ್ಲಿನ ಭೂಪ್ರದೇಶದ ಶೇ.10 ರಷ್ಟು ಮಾತ್ರ ನೈಸರ್ಗಿಕ ಅರಣ್ಯ ಪ್ರದೇಶ ಇದೆ. ಅದರಲ್ಲಿ ವನ್ಯಜೀವಿಗಳ ರಕ್ಷಣೆಗೆ ಅಂತಲೇ ಇರುವುದು ಶೇ.3–4ರಷ್ಟು ಮಾತ್ರ. ಅನೇಕರು ‘ನಮ್ಮದು ಬಡದೇಶ. ಹುಲಿ ರಕ್ಷಣೆ, ಆನೆ ರಕ್ಷಣೆಗಳು ನಮ್ಮ ದೇಶಕ್ಕೆ ದುಬಾರಿಯಾಗುತ್ತದೆ’ ಎಂದು ವಾದಮಾಡುತ್ತಾರೆ. ಈಗಾಗಲೇ ನಮ್ಮ ದೇಶದ ಭೂಪ್ರದೇಶದ ಶೇ. 97ರಷ್ಟು ಭೂಪ್ರದೇಶದಲ್ಲಿಯೂ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ವನ್ಯಜೀವಿ ರಕ್ಷಣೆಗಾಗಿ ಮೀಸಲಿಟ್ಟಿರುವ ಶೇ. 3ರಷ್ಟು ಪ್ರದೇಶದಲ್ಲಿ ಹೇಗೆ ಬಗೆಹರಿಸಲು ಸಾಧ್ಯ. ಅದರಿಂದ ಏನಾದರೂ ಪರಿಹಾರ ಸಾಧ್ಯವೇ?’ ಎಂದು ಅವರು ಪ್ರಶ್ನಿಸಿದರು.

ನಿರಾಶಾದಾಯಕವಾಗಿಲ್ಲ: ‘ಅರಣ್ಯನಾಶ ನಿರಂತರವಾಗಿ ನಡೆಯುತ್ತಿದ್ದರೂ ಪರಿಸ್ಥಿತಿ ಇನ್ನೂ ಪೂರ್ತಿ ಕೈಮೀರಿಲ್ಲ. ಭವಿಷ್ಯ ಆಶಾದಾಯಕವೇ ಆಗಿದೆ’ ಎಂದೂ ಪ್ರತಿಪಾದಿಸಿದರು.

‘ಮಂಗಳೂರಿನ ಹುಲಿವೇಷ, ಉತ್ತರ ಕನ್ನಡದ ಹುಲಿಯಪ್ಪ ದೇವರಂಥ ಸಂಸ್ಕೃತಿಗಳು ನಮ್ಮಲ್ಲಿ ಇನ್ನೂ ಉಳಿದುಕೊಂಡಿವೆ. ಇಂಥ ಸಂಸ್ಕೃತಿಗಳ ಮೂಲಕ ಜನರು ಕೆಲವು ಪ್ರಾಣಿಗಳ ಬಗ್ಗೆ ಆಳವಾದ ಕರುಣೆ ಇರಿಸಿಕೊಂಡಿರುತ್ತಾರೆ. ಅದು ವನ್ಯ ಸಂರಕ್ಷಣೆಗೆ ಉತ್ತಮ ತಳಹದಿ ನೀಡುತ್ತದೆ. ಹಾಗೆಯೇ ಇಂದು ದೊಡ್ಡ ಪ್ರಮಾಣದಲ್ಲಿ ಮಧ್ಯಮವರ್ಗದ ಜನರು, ಪತ್ರಿಕೆಗಳು, ಉಳಿದ ಮಾಧ್ಯಮಗಳು ವನ್ಯಜೀವಿ ಸಂರಕ್ಷಣೆಯನ್ನು ಬೆಂಬಲಿಸುತ್ತಿದ್ದಾರೆ. ಇದೂ ಪರಿಸರ ರಕ್ಷಣೆಗೆ ಪೂರಕವಾಗಿದೆ. ಆದರೆ ಇವಿಷ್ಟೇ ಸಾಲುವುದಿಲ್ಲ. ಇವೆಲ್ಲದಕ್ಕೂ ಒಂದು ವೈಜ್ಞಾನಿಕ ತಳಹದಿಯ ಅವಶ್ಯಕತೆ ಇದೆ’ ಎಂದು ವಿಶ್ಲೇಷಿಸಿದರು.

ಅಭಿವೃದ್ಧಿ ಪರಕಲ್ಪನೆ ಮತ್ತು ಪರಿಸರ ಸಂರಕ್ಷಣೆ:  ‘ನಾವು ಯಾವುದನ್ನು ಅಭಿವೃದ್ಧಿ ಎಂದು ಕರೆದು, ಪರಿಸರ ನಾಶಕ್ಕೆ ಕಾರಣ ಎಂದು ಗುರ್ತಿಸುತ್ತೇವೆಯೋ ಜನರು ಅದಕ್ಕೇ ಮತ ಹಾಕುತ್ತಾರೆ. ಅದನ್ನೇ ಬಯಸುತ್ತಿದ್ದಾರೆ.  ಹಾಗಾಗಿ ತಂತ್ರಜ್ಞಾನ, ವಿಜ್ಞಾನ ಎಲ್ಲವನ್ನೂ ಬಿಟ್ಟು ಹಳೆಯ ಕಾಲಕ್ಕೆ ಹೋದರೆ ಈ ಸಮಸ್ಯೆಗಳೆಲ್ಲ ಪರಿಹಾರವಾಗಿಬಿಡುತ್ತವೆ ಎನ್ನುವುದು ಸುಳ್ಳು’ ಎಂದ ಅವರು, ತಾಳಿಕೆಯ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯನ್ನು ಮಾಡುವುದೊಂದೇ ನಮ್ಮ ಮುಂದಿರುವ ದಾರಿ ಎಂದು ಪರಿಹಾರದ ದಾರಿಯ ಬಗ್ಗೆ ಬೆಳಕು ಚೆಲ್ಲಿದರು.

ಕಾಡು ಅಪಾಯವೇ?

ಗೋಷ್ಠಿಯ ನಂತರದ ಪ್ರಶ್ನೋತ್ತರ ವೇಳೆಯಲ್ಲಿ ‘ಕಾಡಿನಲ್ಲಿ ಕೆಲಸ ಮಾಡಬೇಕಾದರೆ ನಿಮಗೆ ಯಾವುದೇ ಅಪಾಯ ಎದುರಾಗಲಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸುತ್ತ ಉಲ್ಲಾಸ್‌ ಕಾರಂತರು ‘ಹಳ್ಳಿಯಲ್ಲೇ ಹುಟ್ಟಿ ಬೆಳೆದವನೊಬ್ಬನನ್ನು ನ್ಯೂಯಾರ್ಕ್‌ ನಗರಕ್ಕೆ ತೆಗೆದುಕೊಂಡು ಹೋಗಿ ಬಿಟ್ಟುಬಿಟ್ಟರೆ ಅಲ್ಲಿನ ನಿಯಮಾವಳಿಗೆ ಅವನಿಗೆ ಹೊಂದಿಕೊಳ್ಳಲು ಸಾಧ್ಯವಾಗದೇ ಸತ್ತೇ ಹೋಗಬಹುದು. ಹಾಗೆಯೇ ಕಾಡೂ ಕೂಡ. ಕಾಡಿನ ಸಂಕೇತಗಳನ್ನು ಅರಿಯುವ ಕೌಶಲ ತಿಳಿದಿದ್ದರೆ ಅಲ್ಲಿ ಅಂಥ ಅಪಾಯ ಇರುವುದಿಲ್ಲ. ಎಲ್ಲರೂ ಕಾಡಿನಲ್ಲಿ ಹುಲಿ–ಚಿರತೆಗಳೇ ಅಪಾಯಕಾರಿ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಕಾಡಿನಲ್ಲಿ ಹುಲಿ, ಚಿರತೆಗಳಿಗಿಂತ ಆನೆ ಹೆಚ್ಚು ಅಪಾಯಕಾರಿ. ಕರ್ನಾಟಕದಲ್ಲಿ ಆನೆಗಳಿಂದ ಪ್ರತಿವರ್ಷ ನೂರಾರು ಜನ ಸಾಯುತ್ತಾರೆ. ಆದರೆ ಹುಲಿಗಳಿಂದ 10–15 ವರ್ಷಕ್ಕೆ ಮೂರ್ನಾಲ್ಕು  ಜನ ಸಾಯಬಹುದಷ್ಟೆ’ ಎಂದು ಉತ್ತರಿಸಿದರು.

ಕಾಡುಪ್ರಾಣಿ-ಮನುಷ್ಯ ಒಟ್ಟಿಗಿರಲಾರರು

ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಜನರನ್ನು ಸ್ಥಳಾತಂರಿಸುವ ಬಗ್ಗೆಯೂ ಉಲ್ಲಾಸ ಕಾರಂತರು ಪ್ರಸ್ತಾಪಿಸಿದರು. ‘ಕಾಡಿನಲ್ಲಿನ ಜನರು ಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿ ಬದುಕುತ್ತಿರುತ್ತಾರೆ ಎಂದೆಲ್ಲ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾರೆ. ಆದರೆ ವಾಸ್ತವ ಹಾಗಿರುವುದಿಲ್ಲ. ಕಾಡಿನಲ್ಲಿ ಕಾಡುಪ್ರಾಣಿಗಳು ಮತ್ತು ಜನರು ಒಟ್ಟೊಟ್ಟಿಗೇ ಬದುಕುವುದು ಸಾಧ್ಯವಿಲ್ಲ’ ಎಂಬುದು ಅವರ ಸ್ಪಷ್ಟವಾದ ಅಭಿಪ್ರಾಯ. ಈ ಉದ್ದೇಶದಿಂದಲೇ ಉಲ್ಲಾಸ್‌, ಕಾಡಿನಲ್ಲಿನ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿಯೂ ಅವರು ತೊಡಗಿಕೊಂಡಿದ್ದಾರೆ.

‘ಕಾಡಿನಲ್ಲಿನ ಜನರು ತಾವು ಅಲ್ಲಿಯೇ ಇರಬೇಕು. ಅಲ್ಲಿಯೇ ಜಮೀನು ಬೇಕು, ವಿದ್ಯುತ್‌, ಶಾಲೆ, ರಸ್ತೆಗಳು ಬೇಕು ಎಂದು ಎಂದು ಬಯಸುತ್ತಾರೆ. ಇದು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

* ನಾನು ಶಾಲೆಗೆ ಹೋಗುವಾಗ ಕರ್ನಾಟಕದಲ್ಲಿ ನಲವತ್ತು ಹುಲಿಗಳಿದ್ದವು. ಈಗ ನನ್ನ ಮೊಮ್ಮಗಳು ಶಾಲೆಗೆ ಹೋಗುತ್ತಿದ್ದಾಳೆ. ಈಗ ನಾಲ್ಕುನೂರು ಹುಲಿಗಳಿವೆ. ವನ್ಯರಕ್ಷಣೆಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋದರೆ ಅವಳ ಮೊಮ್ಮಕ್ಕಳು ಶಾಲೆಗೆ ಹೋಗುವಾಗ ಹುಲಿಗಳ ಸಂಖ್ಯೆ ನಾಲ್ಕು ಸಾವಿರಕ್ಕೆ ತಲುಪಬಹುದು.
– ಉಲ್ಲಾಸ್‌ ಕಾರಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.