ಧಾರವಾಡ: ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರ ಪ್ರಿಯಶಿಷ್ಯ ಪ್ರಭುಶಂಕರರ ಪ್ರತಿಕ್ರಿಯೆ ಹೇಗಿತ್ತು?
’ನಮ್ಮ ಗುರುಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ, ಈ ಪ್ರಶಸ್ತಿ ಸರ್ವಭಾಷಾಮಯಿಯಾದ ಶಾರದೆಗೆ ಸಲ್ಲಬೇಕು ಎಂದು ಹೇಳಿದ ಅವರು ತಮಗೆ ಸಂದ ಪ್ರಶಸ್ತಿ ಪತ್ರ ಹಾಗೂ ಕರಂಡಕವನ್ನು ಸರಸ್ವತಿಯ ಮುಂದಿಟ್ಟು ಕೈಮುಗಿದರು. ಬಹುಮಾನದ ಮೊತ್ತವನ್ನು ಮಾತ್ರ ಬ್ಯಾಂಕಿಗೆ ಹಾಕಿಕೊಂಡರು!’.
ಪ್ರಭುಶಂಕರರ ಈ ವಿನೋದವನ್ನು ಕೇಳಿದಾಗಲೆಲ್ಲ ಕುವೆಂಪು ಬಾಯ್ತುಂಬ ನಗುತ್ತಿದ್ದರಂತೆ. ಅಷ್ಟುಮಾತ್ರವಲ್ಲ, ತಮ್ಮ ಮನೆಗೆ ಬಂದ ಆಪ್ತೇಷ್ಟರ ಎದುರು ಪ್ರಭುಶಂಕರರನ್ನು ಕರೆದು, ’ಆ ಜ್ಞಾನಪೀಠದ ಜೋಕನ್ನು ಹೇಳು’ ಎಂದು ಮತ್ತೆ ಹೇಳಿಸಿ ನಗುತ್ತಿದ್ದರಂತೆ.
ಜ್ಞಾನಪೀಠದ ಅರ್ಪಣೆಯ ವಿನೋದವನ್ನು ’ಸಾಹಿತ್ಯ ಸಂಭ್ರಮ’ದಲ್ಲಿ ನೆನಪಿಸಿಕೊಂಡಿದ್ದು ಪ್ರೊ. ಎಂ. ಕೃಷ್ಣೇಗೌಡ. ಸಾರಸ್ವತ ಲೋಕದ ಹಿರಿಯರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುವ ’ಪ್ರಸಂಗಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭುಶಂಕರರೊಂದಿಗಿನ ತಮ್ಮ ಸಖ್ಯದ ರಸಕ್ಷಣಗಳನ್ನು ನೆನಪಿಸಿಕೊಂಡರು.
ಎ.ಎನ್. ಮೂರ್ತಿರಾವ್ ಅವರೊಂದಿಗೆ ಪ್ರಭುಶಂಕರರಿಗೆ ಸಲಿಗೆ. ಒಮ್ಮೆ ಕೃಷ್ಣೇಗೌಡರ ಎದುರಿಗೇ ಪ್ರಭುಶಂಕರರು ಮೂರ್ತಿಯರಾಯರನ್ನು ಕಿಚಾಯಿಸಿದರಂತೆ: ’ಮೂರ್ತಿರಾಯರಿಗೆ 97 ವರ್ಷ. ಇನ್ನೂ ಬದುಕಬೇಕು ಅನ್ನುವ ದುರಾಸೆ ಈ ಮನುಷ್ಯನಿಗೆ. ಈ ವಯಸ್ಸಲ್ಲಿ ಪ್ರತಿ ದಿನ 6 ಕಿಲೋಮೀಟರ್ ವಾಕಿಂಗ್ ಮಾಡ್ತಾರೆ’ ಎಂದು ಪ್ರಭುಶಂಕರರು ಛೇಡಿಸಿದರು. ಅದಕ್ಕೆ ಮೂರ್ತಿರಾಯರು ಹೇಳಿದ್ದು: ’ಪ್ರಭುಶಂಕರನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಈ ವಯಸ್ಸಲ್ಲಿ 6 ಕಿ.ಮೀ. ನಡೆಯಲಿಕ್ಕೆ ಆಗುತ್ತದೆಯೇ? ಬರೀ 3 ಕಿ.ಮೀ. ನಡೆಯುತ್ತೇನೆ ಅಷ್ಟೇ. ಆಮೇಲೆ ವಾಪಸ್ಸು ಬಂದು ಬಿಡ್ತೇನೆ’.
ಮೂರ್ತಿರಾಯರ ಕುರಿತ ಮತ್ತೊಂದು ಹಾಸ್ಯಪ್ರಸಂಗ ಅವರ 98ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನಡೆಯಿತು. ’ಕವಿಗಳ ಜನ್ಮದಿನ ಹಾಗೂ ಸಾವಿನ ದಿನಗಳನ್ನು ನೆನಪಿಟ್ಟುಕೊಳ್ಳಲಿಕ್ಕೆ ಸಂಶೋಧಕರು ಕಷ್ಟಪಡುತ್ತಾರೆ. ಮೂರ್ತಿರಾಯರು ಹುಟ್ಟಿದ್ದು 1900ರಲ್ಲಿ. ನೆನಪಿಟ್ಟುಕೊಳ್ಳಲಿಕ್ಕೆ ತುಂಬಾ ಸುಲಭವಾದ ವರ್ಷವಿದು. ಅದೇ ರೀತಿ ಸಂಶೋಧಕರಿಗೆ ಸುಲಭವಾಗಲೆಂದು ಅವರು 2000 ಇಸವಿಗೆ ಮನಸ್ಸು ಮಾಡಬೇಕು’. ತಕ್ಷಣ ಎದ್ದುನಿಂತ ಮೂರ್ತಿರಾಯರು ಹೇಳಿದ್ದು – ‘ನಿಮ್ಮ ಸಂಶೋಧಕರು ಸಾಯಲಿ. ನಾನು ಬದುಕುತ್ತೇನೆ’.
ಇದೆಲ್ಲವೂ ವಿನೋದದ ಮಾತಾಯಿತು. ಪ್ರಭುಶಂಕರರ ವ್ಯಕ್ತಿತ್ವಕ್ಕೆ ಉದಾಹರಣೆಯಂಥ ಮತ್ತೊಂದು ಪ್ರಸಂಗ ಹೀಗಿದೆ. ಏನೆಲ್ಲ ಸಾಧನೆ ಮಾಡಿದ ತಮ್ಮ ಗುರುಗಳಿಗೆ ವಿಶ್ವವಿದ್ಯಾಲಯದ ಉಪ ಕುಲಪತಿ ಗೌರವವೂ ದೊರೆಯಲಿಲ್ಲವಲ್ಲ ಎಂದು ಕೃಷ್ಣೇಗೌಡರಿಗೆ ಅನ್ನಿಸಿತು. ತಮ್ಮ ಖೇದವನ್ನು ಗುರುಗಳೊಂದಿಗೆ ಹಂಚಿಕೊಂಡ ಅವರು, ‘ನಿಮ್ಮ ಸಾಧನೆಯನ್ನು ಸರ್ಕಾರ ಗುರ್ತಿಸಲಿಲ್ಲ ಎಂದು ನಿಮಗೆ ಒಮ್ಮೆಯಾದರೂ ಬೇಸರವಾಗಲಿಲ್ಲವೇ?’ ಎಂದರು.
ಶಿಷ್ಯನ ಪ್ರಶ್ನೆಗೆ ಪ್ರಭುಶಂಕರರು, ’ಕುವೆಂಪು ಕೈ ಚಾಚಿದರೆ ಅವರಿಗೆ ತಾಕುವಷ್ಟು ಹತ್ತಿರದಲ್ಲಿ ಕೂರುತ್ತಿದ್ದೆ. ಅಂತರಂಗ ಬಹಿರಂಗ ಬೇರೆಯಿಲ್ಲದ ವ್ಯಕ್ತಿಯ ಸಮೀಪದಲ್ಲಿ ಐವತ್ತು ವರ್ಷ ಬೆಳೆದೆ. ರಾಮಕೃಷ್ಣ ಆಶ್ರಮದ ದೊಡ್ಡ ಸಾಧಕರ ಸಾಮೀಪ್ಯ ಹೊಂದಿರುವೆ. ಇದೆಲ್ಲ ಸೌಭಾಗ್ಯದ ಮುಂದೆ ವಿಶ್ವವಿದ್ಯಾಲಯದ ಉಪ ಕುಲಪತಿ ಹುದ್ದೆ ಅಥವಾ ಪ್ರಶಸ್ತಿ ಮುಖ್ಯವೆನ್ನಿಸುವುದಿಲ್ಲ’.
ಕೃಷ್ಣೇಗೌಡರಿಗೆ ಸರಿಮಿಗಿಲಾಗಿ ಸಭೆಯ ಮನಸೂರೆಗೊಂಡಿದ್ದು ಮಂಡ್ಯ ರಮೇಶ್. ಶಿವರಾಮ ಕಾರಂತರ ಹಾಸ್ಯ ಮತ್ತು ಸಮಯಪ್ರಜ್ಞೆಯನ್ನು ಸೂಚಿಸುವ ನವಿರು ಪ್ರಸಂಗಗಳನ್ನು ಅವರು ನೆನಪಿಸಿಕೊಂಡರು.
ಕಾರಂತರು ’ನೀನಾಸಮ್’ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಗಮಿಸಿದ್ದ ಸಂದರ್ಭ. ವಿದ್ಯಾರ್ಥಿಗಳು ಒಬ್ಬೊಬ್ಬರೇ ಪರಿಚಯಿಸಿಕೊಳ್ಳತೊಡಗಿದರು. ಒಬ್ಬ ವಿದ್ಯಾರ್ಥಿನಿ ಎದ್ದುನಿಂತು ’ನನ್ನ ಹೆಸರು ವಿಶ್ವೇಶ್ವರಿ ಹಿರೇಮಠ ಅಂತ’ ಎಂದಳು. ಕಾರಂತರು ತಕ್ಷಣ ಪ್ರತಿಕ್ರಿಯಿಸಿದ್ದು –’ವಿಶ್ವೇಶ್ವರಿ ಸರಿ. ಅಂತ ಎಂತ?’. ಮತ್ತೊಬ್ಬ ಹುಡುಗ ’ಹಳ್ಳಿಕೇರಿ ಮಠ ಅಂತ’ ಎಂದಾಗ ಕಾರಂತರದು ಮತ್ತದೇ ಪ್ರತಿಕ್ರಿಯೆ, ’ಅಂತ ಎಂತ?’. ಈ ಪ್ರಶ್ನೋತ್ತರದಿಂದ ಜಾಗೃತನಾದ ಮೂರನೇ ವಿದ್ಯಾರ್ಥಿ ’ನನ್ನ ಹೆಸರು ಮಂಡ್ಯ ರಮೇಶ್ ಅಷ್ಟೆ’ ಎಂದು ಹೇಳಿದ. ಕಾರಂತರು ಸುಮ್ಮನಾಗಲಿಲ್ಲ. ’ಅಷ್ಟೆ’ ಎನ್ನುವ ಪದವನ್ನು ತಮಾಷೆ ಮಾಡಿದರು. ರಮೇಶ್ ಕೂಡ ಸುಮ್ಮನಾಗಲಿಲ್ಲ. ’ಸರ್, ನಿಮ್ಮ ಹೆಸರನ್ನು ಹೀಗೆಲ್ಲ ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ನಿಮ್ಮ ಹೆಸರೇ ಶಿವರಾಮ ಕಾರಂತ’. ಅದಕ್ಕೆ ಕಾರಂತರ ಪ್ರತಿಕ್ರಿಯೆ – ’ತಲೆಹರಟೆ ತಲೆಹರಟೆ’.
ಇದೇ ಕಾರಂತರು ನೀನಾಸಮ್ ವಿದ್ಯಾರ್ಥಿಗಳಿಗೆ ನಾಟಕವೊಂದನ್ನು ಮಾಡಿಸಿದರು. ಊರಿನವರ ಎದುರು ನಾಟಕ ಪ್ರದರ್ಶಿಸಿ ಜನರ ಪ್ರತಿಕ್ರಿಯೆ ಕೇಳಿದರು. ಕಾರಂತರ ಸಿಟ್ಟಿನ ಬಗ್ಗೆ ಗೊತ್ತಿದ್ದ ಯಾರೂ ಚಕಾರ ಎತ್ತಲಿಲ್ಲ. ಆದರೆ, ಉತ್ಸಾಹಿ ವ್ಯಕ್ತಿಯೊಬ್ಬ – ’ವಿಕಾಸದ ಬಗ್ಗೆ ಏನೆಲ್ಲ ಮಾತನಾಡುತ್ತೀರಿ. ಮಂಗನಿಂದ ಮಾನವ ಎಂದು ಹೇಳುತ್ತೀರಿ? ಅದಕ್ಕೆ ಸಾಕ್ಷಿ ಏನಿದೆ?’ ಎಂದು ಪ್ರಶ್ನಿಸಿದ. ಅಲ್ಲಿದ್ದವರಿಗೆಲ್ಲ ಗಾಬರಿ. ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಕಾರಂತರು ಮೇಲಿನಿಂದ ಕೆಳಗಿನವರೆಗೂ ನೋಡಿ ಹೇಳಿದರು – ’ನೀನೇ ಉಂಟಲ್ಲವೋ’.
ಗೋಷ್ಠಿಯಲ್ಲಿ ಭಾಗವಹಿಸಿದ್ದ ಬಿ. ಜಯಶ್ರೀ, ಸುಮಂಗಲಾ, ಸಿ.ಯು. ಬೆಳ್ಳಕ್ಕಿ ಹಾಗೂ ಸ್ವಾಮಿರಾವ್ ಕುಲಕರ್ಣಿ ಕೂಡ ಸಾರಸ್ವತ ಲೋಕದ ಹಿರಿಯರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಗಂಭೀರ ಗೋಷ್ಠಿಗಳ ನಡುವೆ ಅನಾವರಣಗೊಂಡ ಈ ’ಪ್ರಸಂಗಗಳು’ ಸಭಿಕರ ಮುಖದಲ್ಲಿನ ಸಿಕ್ಕುಗಳನ್ನು ಸಡಿಲಗೊಳಿಸುವಂತಿದ್ದವು.
ಆನ್‌ಲೈನ್‌ನಲ್ಲಿ 5.54 ಲಕ್ಷ ಜನರಿಂದ ವೀಕ್ಷಣೆ
ಧಾರವಾಡ: ಮೊದಲ ಎರಡು ದಿನಗಳ ಸಾಹಿತ್ಯ ಸಂಭ್ರಮವನ್ನು ವೀಕ್ಷಿಸಿದವರ ಸಂಖ್ಯೆ 5.54 ಲಕ್ಷ ಎಂದು ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ಹೇಳಿದರು.
ಕಳೆದ ವರ್ಷ 52 ಸಾವಿರ ಜನ ಮಾತ್ರ ವಿವಿಡ್ ಲಿಪಿ ಜಾಲತಾಣದ ಮೂಲಕ ವೀಕ್ಷಿಸಿದ್ದರು. ಈ ಬಾರಿ ಎರಡು ದಿನ ಐದೂವರೆ ಲಕ್ಷ ವೀಕ್ಷಣೆ ಮಾಡಿದ್ದಾರೆ. ಅಮೆರಿಕ, ಯೂರೋಪ್‌ನ ವಿವಿಧ ರಾಷ್ಟ್ರಗಳಲ್ಲಿ ಹೆಚ್ಚು ಸಂಖ್ಯೆಯ ಕನ್ನಡಿಗರು ಸಂಭ್ರಮವನ್ನು ವೀಕ್ಷಿಸಿದ್ದಾರೆ. ಮೂರನೇ ದಿನದ ಅಂಕಿ ಅಂಶ ಇನ್ನೂ ಸಿಕ್ಕಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.