ಬೆಂಗಳೂರು: ‘ಸಾಯಿ ವೆಂಕಟೇಶ್ವರ ಮಿನರಲ್ಸ್ ಲಿಮಿಟೆಡ್‌ಗೆ 550 ಎಕರೆ ಮಂಜೂರು ಮಾಡುವಂತೆ ನಾನು ಯಾವ ಕಡತದ ಮೇಲೂ ಬರೆದಿಲ್ಲ. ಅದು ನನ್ನ ಸಹಿಯೇ ಅಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ಕಡತ ನನ್ನ ಬಳಿಗೆ ಬಂದಿತ್ತೋ ಅಥವ ಬಂದಿರಲಿಲ್ಲವೋ ನನಗೆ ಗೊತ್ತಿಲ್ಲ’ ಎಂದೂ ಹೇಳಿದರು.
‘2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ವರ್ಗಾವಣೆ ದಂಧೆ ಆರಂಭಿಸಿತ್ತು. ಆ ಬಗ್ಗೆ ನಾನು ಮಾತನಾಡಿದೆ ಎಂದು ಈ ಪ್ರಕರಣಕ್ಕೆ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೋರಿ 2023ರ ನವೆಂಬರ್‌ನಲ್ಲಿ ಪತ್ರ ಬರೆಯಲಾಯಿತು. ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರಿಗಳೇ ಹಾಗೆ ಬರೆದುಕೊಂಡು, ನನ್ನ ಸಹಿ ಹಾಕಿಕೊಂಡಿರಬಹುದು’ ಎಂದರು.
ಕಡತಕ್ಕೆ ನೀವು ಸಹಿ ಹಾಕಿಯೇ ಇಲ್ಲವೇ? ನಿಮ್ಮ ಬಳಿಗೆ ಕಡತ ಬಂದಿರಲಿಲ್ಲವೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕಡತಗಳು ಬರುತ್ತವೆ. ಅವನ್ನೆಲ್ಲಾ ನೆನಪಿನಲ್ಲಿ ಇರಿಸಿಕೊಳ್ಳಲು ಆಗುತ್ತದೆಯೇ? ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸೇರಿದ ಕಡತ ನನ್ನ ಬಳಿಗೆ ಬಂದಿತ್ತೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ಅಧಿಕಾರಿಗಳು ಕಡತ ಸಿದ್ದಪಡಿಸಿ ಕೊಟ್ಟಿರುತ್ತಾರೆ, ನಾನು ಸಹಿ ಹಾಕಿರುತ್ತೇನೆ’ ಎಂದರು.
‘ಇದು 14 ವರ್ಷದಷ್ಟು ಹಳೆಯ ಪ್ರಕರಣ. ಯಾವೆಲ್ಲಾ ಅಧಿಕಾರಿಗಳಿದ್ದರು ಎಂದು ನೆನಪಿರಲು ಸಾಧ್ಯವೇ? 550 ಎಕರೆ ಮಂಜೂರು ಮಾಡುವಾಗ ಹೊಸ ಹೆಸರನ್ನು ಸೇರಿಸಲಾಗಿದೆ. ಅದನ್ನು ಸೇರಿಸಿದವರು ಯಾರು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಬೇಕು. ಮಂಜೂರಾತಿ ನಡೆದ ಸಂದರ್ಭದಲ್ಲಿ ಗಣಿ ಇಲಾಖೆಯ ಅಧಿಕಾರಿಯ ಮಗನ ಖಾತೆಗೆ ₹20 ಲಕ್ಷ ಜಮೆಯಾಗಿತ್ತು. ಅದನ್ನು ನಾನೇ ಪತ್ತೆ ಮಾಡಿದ್ದೆ. ₹20 ಲಕ್ಷ ಹೇಗೆ ಬಂತು ಎಂಬುದನ್ನು ತನಿಖಾಧಿಕಾರಿಗಳು ಹೇಳಬೇಕು’ ಎಂದರು.
‘ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು’ ‘ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಅಕ್ರಮವಾಗಿದೆ ಎಂದು ಯು.ವಿ.ಸಿಂಗ್ ವರದಿಯಲ್ಲಿ ಹೇಳಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೆ ನನ್ನ ವಿರುದ್ಧದ ದೂರಿನಲ್ಲಿ ತನಿಖೆ ನಡೆಸುವಂತೆ ಹೇಳಿತ್ತು’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ‘ನನ್ನ ವಿರುದ್ಧದ ಪ್ರಕರಣದಲ್ಲಿ ತನಿಖೆ ನಡೆಸಿ ವರದಿಯನ್ನು ನಮಗೇ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಲೋಕಾಯಕ್ತ ಎಸ್‌ಐಟಿಗೆ 2017ರಲ್ಲೇ ಸೂಚಿಸಿತ್ತು. ಅದಕ್ಕೆ ಮೂರು ತಿಂಗಳ ಗಡುವು ನೀಡಿತ್ತು. ಇಷ್ಟು ವರ್ಷವಾದರೂ ತನಿಖೆ ಏಕೆ ಪೂರ್ಣಗೊಳಿಸಿಲ್ಲ. ಸುಪ್ರೀಂ ಕೋರ್ಟ್‌ಗೆ ವರದಿ ನೀಡದೇ ರಾಜ್ಯಪಾಲರ ಅನುಮತಿಗೆ ಅರ್ಜಿ ಹಾಕಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು’
‘ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಅಕ್ರಮವಾಗಿದೆ ಎಂದು ಯು.ವಿ.ಸಿಂಗ್ ವರದಿಯಲ್ಲಿ ಹೇಳಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೆ ನನ್ನ ವಿರುದ್ಧದ ದೂರಿನಲ್ಲಿ ತನಿಖೆ ನಡೆಸುವಂತೆ ಹೇಳಿತ್ತು’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
‘ನನ್ನ ವಿರುದ್ಧದ ಪ್ರಕರಣದಲ್ಲಿ ತನಿಖೆ ನಡೆಸಿ, ವರದಿಯನ್ನು ನಮಗೇ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಲೋಕಾಯಕ್ತ ಎಸ್‌ಐಟಿಗೆ 2017ರಲ್ಲೇ ಸೂಚಿಸಿತ್ತು. ಅದಕ್ಕೆ ಮೂರು ತಿಂಗಳ ಗಡುವು ನೀಡಿತ್ತು. ಇಷ್ಟು ವರ್ಷವಾದರೂ ತನಿಖೆ ಏಕೆ ಪೂರ್ಣಗೊಳಿಸಿಲ್ಲ. ಸುಪ್ರೀಂ ಕೋರ್ಟ್‌ಗೆ ವರದಿ ನೀಡದೇ, ರಾಜ್ಯಪಾಲರ ಅನುಮತಿಗೆ ಅರ್ಜಿ ಹಾಕಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಎಚ್‌ಡಿಕೆ ದೂರು ಕೊಟ್ಟರೆ ತನಿಖೆ’
ತುಮಕೂರು: ಜಂತ್‌ಕಲ್ ಗಣಿ ಗುತ್ತಿಗೆ ಆದೇಶ ಪತ್ರಕ್ಕೆ ತಮ್ಮ ಸಹಿ ನಕಲು ಮಾಡಲಾಗಿದೆ ಎಂದು ಹೇಳಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ತನಿಖೆ ಮಾಡಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪೊಲೀಸರಿಗೆ ದೂರು ಕೊಟ್ಟರೆ ತನಿಖೆ ಮಾಡುತ್ತಾರೆ. ನಂತರ ಸತ್ಯಾಂಶ ಹೊರ ಬರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.