ADVERTISEMENT

ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ನಲಪಾಡ್‌ ಗೂಂಡಾಗಿರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಉಭಯ ಸದನಗಳಲ್ಲಿ  ಪ್ರತಿಧ್ವನಿಸಿದ ನಲಪಾಡ್‌ ಗೂಂಡಾಗಿರಿ
ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ನಲಪಾಡ್‌ ಗೂಂಡಾಗಿರಿ   

ಬೆಂಗಳೂರು: ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮದ್‌ ನಲಪಾಡ್‌ ಮತ್ತು ಆತನ ಸಹಚರರು ಗೂಂಡಾ ವರ್ತನೆ ತೋರಿ, ವಿದ್ವತ್‌ ಮೇಲೆ ಹಲ್ಲೆ ಮಾಡಿದ ಪ್ರಕರಣ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಪ್ರತಿಧ್ವನಿಸಿತು.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಇದು ಗೂಂಡಾ ಸರ್ಕಾರ, ರಾಕ್ಷಸ ಪ್ರವೃತ್ತಿಯ ಸರ್ಕಾರ. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಕೆ.ಆರ್. ಪುರಂನಲ್ಲಿ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಎಂಬುವವರು ಬಿಬಿಎಂಪಿ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೂ ಹಲ್ಲೆ ನಡೆದಿದೆ. ಇದು ಗಂಭೀರ ವಿಷಯ’ ಎಂದು ಹರಿಹಾಯ್ದರು.

ADVERTISEMENT

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ನಿಲುವಳಿ ಸೂಚನೆಯಡಿ ಇದನ್ನು ತಂದಿರುವುದು ಸರಿಯಲ್ಲ’ ಎಂದು ವಾದಿಸಿದರು. ಅದಕ್ಕೆ ಧ್ವನಿಗೂಡಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಈ ಪ್ರಕರಣದಲ್ಲಿ ಆರೋಪಿಗಳ ಬಂಧನವೂ ಆಗಿದೆ. ಮತ್ತೆ ಇಲ್ಲಿ ಚರ್ಚಿಸುವುದು ಸರಿಯಲ್ಲ’ ಎಂದರು.

ಶೆಟ್ಟರ್‌ ಟೀಕೆಗಳಿಗೆ ಉತ್ತರಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ‘ಒಂದೆರಡು ಪ್ರಕರಣ ಮುಂದಿಟ್ಟು ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಕದ್ದು ಮುಚ್ಚಿ ಲೈವ್‌ಬ್ಯಾಂಡ್ ಸೇರಿದಂತೆ ಇತರ ಅಕ್ರಮ ಚಟುವಟಿಕೆ ನಡೆಸುತ್ತಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಬಿಬಿಎಂಪಿ ಕಚೇರಿಗೆ ನುಗ್ಗಿ ನಾರಾಯಣ ಸ್ವಾಮಿ ಪೆಟ್ರೋಲ್ ಸುರಿದು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ರೆಡ್ಡಿ ತಿಳಿಸಿದರು.

‘ಗೂಂಡಾಗಿರಿಗೆ ಪರವಾನಗಿ ಪಡೆದಿದ್ದಾರೆಯೇ?’:

ವಿಧಾನ ಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ‘ಕಾಂಗ್ರೆಸ್‌ ಸರ್ಕಾರದಲ್ಲಿ ಶಾಸಕರು ಮತ್ತು ಅವರ ಮಕ್ಕಳು ಗೂಂಡಾಗಿರಿ ಮಾಡಲು ಪರವಾನಗಿ ಪಡೆದಿದ್ದಾರೆಯೇ’ ಎಂದು ವಾಗ್ದಾಳಿ ನಡೆಸಿದರು.

‘ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿಬಿಎಂಪಿ ಕಚೇರಿಗೆ ಪೆಟ್ರೊಲ್‌ ಸುರಿದು, ಬೆಂಕಿ ಹಚ್ಚಲು ಹೋಗಿದ್ದಾನೆ. ಇದು ನಿಮ್ಮ ಸರ್ಕಾರಕ್ಕೆ ಶೋಭೆ ತರುವುದೇ’ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.

‘ಗುಂಡುಕಲ್ಲಿನಂತೆ ಕುಳಿತಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳಲು ನಾನು ಇಷ್ಟಪಡುವುದಿಲ್ಲ’ ಎಂದು ಮಾತಿನಲ್ಲಿ ತಿವಿದರು. ಇದಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಧ್ವನಿಗೂಡಿಸಿದರು.

‘ಸದನ, ಸರ್ಕಾರದ ಗೌರವಕ್ಕೆ ಧಕ್ಕೆಯಾಗಿದ್ದರೆ ಕ್ಷಮಿಸಿ’

‘ತಪ್ಪಾಗಿದೆ ಕ್ಷಮಿಸಿ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಮಗನಿಂದಾಗಿ ಸದನ ಮತ್ತು ಸರ್ಕಾರದ ಗೌರವಕ್ಕೆ ಧಕ್ಕೆ ಬಂದಿದ್ದರೆ ಕ್ಷಮೆ ಯಾಚಿಸುತ್ತೇನೆ. ನನ್ನ ಪರಿಸ್ಥಿತಿ ಯಾವ ತಂದೆಗೂ ಬಾರದಿರಲಿ’ ಎಂದು ಹ್ಯಾರಿಸ್‌ ಭಾವುಕರಾದರು.

ವಿಧಾನಸಭೆಯಲ್ಲಿ ಮಾತನಾಡಿದ ಹ್ಯಾರೀಸ್‌, ‘ಹಲ್ಲೆಯಾಗಿರುವುದು ನೋವಿನ ಸಂಗತಿ. ಈ ರೀತಿ ಆಗಬಾರದಿತ್ತು. ನಾನು ಈ ಸದನದ ಸದಸ್ಯ. ಸದನದ ಬಹುತೇಕ ಎಲ್ಲ ಸದಸ್ಯರಿಗೆ ಮಕ್ಕಳಿದ್ದಾರೆ. ಮಕ್ಕಳನ್ನು ದಾರಿ ತಪ್ಪದಂತೆ ನೋಡಿಕೊಂಡು ಒಳ್ಳೆ ಬುದ್ದಿ ಕಲಿಸುವುದು ತಂದೆಯಾದವರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದು ಅಲವತ್ತುಕೊಂಡರು.

‘ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಯಾರೇ ಮಾಡಿದರೂ ತಪ್ಪೇ. ಮಗನನ್ನು ನಾನೇ ಪೊಲೀಸರಿಗೆ ಶರಣಾಗತಿ ಮಾಡಿಸಿದ್ದೇನೆ. ಚುನಾವಣೆ ಹತ್ತಿರದಲ್ಲಿರುವುದರಿಂದ ವಿಷಯ ದೊಡ್ಡದು ಮಾಡಲಾಗುತ್ತಿದೆ. ಸದನಕ್ಕೆ ಮತ್ತೆ ನಾವೆಲ್ಲ ಬರಬೇಕಾದರೆ ಜನರ ಬಳಿಗೆ ಹೋಗಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.