ADVERTISEMENT

6 ಸಾಧಕರಿಗೆ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿ

ಪುರಸ್ಕೃತರಿಗೆ ತಲಾ ರೂ 55 ಲಕ್ಷ ನಗದು, 22 ಕ್ಯಾರೆಟ್‌ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2014, 19:30 IST
Last Updated 13 ನವೆಂಬರ್ 2014, 19:30 IST


ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಕಂಪ್ಯೂಟರ್‌ ವಿಭಾ­ಗದ ಪ್ರಾಧ್ಯಾಪಕ ಪ್ರೊ. ಜಯಂತ್‌ ಹರಿಸ್ತಾ ಸೇರಿದಂತೆ ಆರು ಜನ ಸಾಧಕರಿಗೆ ಪ್ರತಿಷ್ಠಿತ ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ 2014ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ತಲಾ ರೂ. 55 ಲಕ್ಷ ನಗದು, 22 ಕ್ಯಾರೆಟ್‌ನ ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಪ್ರತಿಷ್ಠಾನದ ಅಧ್ಯಕ್ಷ ಎನ್‌.ಆರ್‌. ನಾರಾ­ಯಣಮೂರ್ತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ‘ನಮ್ಮ ಕಾಲದ ಅತ್ಯುತ್ತಮ ಸಂಶೋಧ­ಕರನ್ನು ಗುರುತಿಸಿ, ಗೌರವಿಸಲು ಹೆಮ್ಮೆ ಎನಿಸುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ಈ ಸಾಧಕರು ನೀಡಿದ ಕೊಡುಗೆ ದೊಡ್ಡ­ದಾಗಿದೆ’ ಎಂದು ಮೂರ್ತಿ ಹೇಳಿದರು.

‘5 ವರ್ಷದಿಂದ ಈ ಪ್ರಶಸ್ತಿ ನೀಡಲಾ­ಗುತ್ತಿದ್ದು, 2015ರ ಜನವರಿ 5ರಂದು ಕೋಲ್ಕತ್ತದಲ್ಲಿ ನಡೆಯಲಿರುವ ಸಮಾ­ರಂಭ­ದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದರು.

2014ನೇ ಸಾಲಿನ ಪ್ರಶಸ್ತಿ ಪುರಸ್ಕೃತರು–
ಜಯಂತ್‌ ಹರಿಸ್ತಾ (ಎಂಜಿನಿಯ­ರಿಂಗ್‌ ಅಂಡ್‌ ಕಂಪ್ಯೂಟರ್‌ ಸೈನ್ಸ್‌): ‘ಐಐಎಸ್‌ಸಿ’ಯ ಸೂಪರ್‌ ಕಂಪ್ಯೂಟರ್‌ ಎಜ್ಯುಕೇಷನ್‌ ಅಂಡ್‌ ರಿಸರ್ಚ್‌ ಸೆಂಟರ್‌ನ ಪ್ರಾಧ್ಯಾಪಕ ಪ್ರೊ. ಹರಿಸ್ತಾ, ದತ್ತಾಂಶ ಆಧಾರಿತ ಎಂಜಿನ್‌ಗಳ ವಿನ್ಯಾಸ­ಕ್ಕಾಗಿ ಪ್ರಶಸ್ತಿಗೆ ಭಾಜನ­ರಾಗಿದ್ದಾರೆ.

ಶಮ್ನಾದ್‌ ಬಷೀರ್‌ (ಮಾನವಿಕ):  ನವದೆ­ಹಲಿಯ ಇನ್‌ಕ್ರೀಸಿಂಗ್‌ ಡೈವರ್ಸಿಟಿ ಬೈ ಇನ್‌ಕ್ರೀಸಿಂಗ್‌ ಅಕ್ಸೆಸ್‌ (ಐಡಿಐಎ) ಸ್ಥಾಪಕರಾದ ಬಷೀರ್‌, ಔಷಧಿಗಳ ಹಕ್ಕುಸ್ವಾಮ್ಯ ಹಾಗೂ ಅದರ ಜಾರಿ ಕುರಿತು ನಡೆಸಿದ ವಿಶ್ಲೇಷಣೆಗಾಗಿ ಪ್ರಶಸ್ತಿ ಪಡೆದಿದ್ದಾರೆ.

ಟಿ.ಶುಭಾ (ಜೀವ ವಿಜ್ಞಾನ): ಮುಂಬೈನ ಟಾಟಾ ಸಂಶೋಧನಾ ಸಂಸ್ಥೆಯ (ಟಿಐಎಫ್‌ಆರ್‌) ಸಹಾಯಕ ಪ್ರಾಧ್ಯಾ­ಪಕಿ ಹಾಗೂ ಮುಖ್ಯ ಸಂಶೋಧಕಿ ಟಿ. ಶುಭಾ, ಮಿದುಳಿನ ಗ್ರಹಿಕೆ ಮತ್ತು ಸ್ಮರಣ ಕೇಂದ್ರದ ಕಾರ್ಯಾಚರಣೆ ಮೇಲೆ ನಡೆಸಿದ ಸಂಶೋಧನೆಗಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಧುಸೂದನ್‌ (ಗಣಿತಶಾಸ್ತ್ರ): ಮೈಕ್ರೋಸಾಫ್ಟ್‌ನ ಪ್ರಧಾನ ಸಂಶೋಧ­ಕರಾದ ಮಧುಸೂದನ್‌, ಸಾಫ್ಟ್‌ವೇರ್‌ ದೋಷ­ಗಳನ್ನು ಸರಿಪಡಿಸಲು ಕಂಡು ಹಿಡಿ­ದಿರುವ ವಿಶಿಷ್ಟ ಕೋಡ್‌ ತಂತ್ರಜ್ಞಾನ­ಕ್ಕಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೀವಾರಿ ಚಂದ್ರಶೇಖರ್‌ (ಭೌತಿಕ ವಿಜ್ಞಾನ): ಹೈದರಾಬಾದ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಯಾಗಿರುವ ಚಂದ್ರ­ಶೇಖರ್‌, ಜೈವಿಕ ರಸಾಯನ ಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಾಗಿ ಪ್ರಶಸ್ತಿ ಪಡೆದಿದ್ದಾರೆ.

ಎಸ್ತರ್‌ ಡಫ್ಲೊ (ಸಮಾಜ ವಿಜ್ಞಾನ): ಅಮೆರಿಕದ ಮಸ್ಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆಯಲ್ಲಿ ಅಬ್ದುಲ್‌ ಲತೀಫ್‌ ಜಮೀಲ್‌ ಬಡತನ ನಿವಾರಣೆ ಹಾಗೂ ಆರ್ಥಿಕ ಅಭಿವೃದ್ಧಿ ಕೇಂದ್ರದ ಸ್ಥಾಪಕಿ ಎಸ್ತರ್‌, ಭಾರತ ಹಾಗೂ ಆಫ್ರಿಕಾದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತೀರ್ಪುಗಾರರ ಮಂಡಳಿಯಲ್ಲಿ ಪ್ರೊ.ಪ್ರದೀಪ್‌ ಕೋಸ್ಲಾ (ಎಂಜಿನಿಯರಿಂಗ್‌ ಅಂಡ್‌ ಕಂಪ್ಯೂಟರ್‌ ಸೈನ್ಸ್‌), ಪ್ರೊ.ಅಮರ್ತ್ಯ ಸೇನ್‌ (ಮಾನವಿಕ), ಪ್ರೊ.ಇಂದರ್‌ ವರ್ಮಾ (ಜೀವ ವಿಜ್ಞಾನ), ಪ್ರೊ.ಶ್ರೀನಿವಾಸ ವರ್ಧನ್‌ (ಗಣಿತಶಾಸ್ತ್ರ), ಪ್ರೊ.ಶ್ರೀನಿವಾಸ ಕುಲಕರ್ಣಿ (ಭೌತಿಕ ವಿಜ್ಞಾನ) ಮತ್ತು ಪ್ರೊ. ಕೌಶಿಕ್‌ ಬಸು (ಸಮಾಜ ವಿಜ್ಞಾನ) ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT