ADVERTISEMENT

ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ₹604 ಕೋಟಿ ಕಬ್ಬಿನ ಬಿಲ್‌ ಬಾಕಿ

ಸಂತೋಷ ಈ.ಚಿನಗುಡಿ
Published 30 ಮೇ 2024, 0:25 IST
Last Updated 30 ಮೇ 2024, 0:25 IST
<div class="paragraphs"><p>ದಡ್ಡಿ ಗ್ರಾಮದ ಸೇತುವೆ ಹತ್ತಿರ ಕಬ್ಬು ತುಂಬಿದ ಹಲವಾರು ಟ್ರ್ಯಾಕ್ಟರ್‌ಗಳನ್ನು ಶನಿವಾರ ಗ್ರಾಮಸ್ಥರು ತಡೆದರು<br></p></div>

ದಡ್ಡಿ ಗ್ರಾಮದ ಸೇತುವೆ ಹತ್ತಿರ ಕಬ್ಬು ತುಂಬಿದ ಹಲವಾರು ಟ್ರ್ಯಾಕ್ಟರ್‌ಗಳನ್ನು ಶನಿವಾರ ಗ್ರಾಮಸ್ಥರು ತಡೆದರು

   

ಬೆಳಗಾವಿ: ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ₹604.36 ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳೆಗಾರರಿಗೆ ತೊಂದರೆಯಾಗಿದೆ.

ಈ ಹಂಗಾಮಿನಲ್ಲಿ 76 ಕಾರ್ಖಾನೆಗಳು 586 ಲಕ್ಷ ಟನ್‌ ಕಬ್ಬು ನುರಿಸಿವೆ. 52.91 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಲಾಗಿದ್ದು, 9.04 ರಿಕವರಿ ಬಂದಿದೆ. ಬೆಳೆಗಾರರಿಗೆ ಪಾವತಿಸ ಬೇಕಿರುವ ಒಟ್ಟು ಮೊತ್ತ ₹19,899.14 ಕೋಟಿ ಆಗಿದ್ದು, ಈ ಪೈಕಿ ಮೇ 15ರ ವರೆಗೆ ಮೊದಲ ಕಂತಿನಲ್ಲಿ ರೈತರಿಗೆ ₹19,294.78 ಕೋಟಿ ಪಾವತಿಸಲಾ ಗಿದೆ. ಇನ್ನೂ ಶೇ 3ರಷ್ಟು ಹಣ ಬಾಕಿ ಇದೆ.

ADVERTISEMENT

₹2,920 ಇದ್ದ ಎಫ್‌ಆರ್‌ಪಿ ದರವನ್ನು ಈ ಬಾರಿ ₹3,150ಕ್ಕೆ ಏರಿಸಲಾಗಿದೆ. ಮಾರ್ಚ್‌ ಕೊನೆಯ ವಾರದಲ್ಲಿ ಎಲ್ಲ ಕಾರ್ಖಾನೆಗಳು ಹಂಗಾಮು ಮುಗಿಸಿವೆ. ಡಿಸೆಂಬರ್‌, ಜನವರಿಯಲ್ಲಿ ಸಾಗಿಸಿದ ಕಬ್ಬಿನ ಹಣ ಪಾವತಿಸಿವೆ. ಆದರೆ, ಫೆಬ್ರುವರಿಯಲ್ಲಿ ರೈತರು ಸಾಗಿಸಿದ ಕಬ್ಬಿನ ಬಾಕಿ ಹಣ ಸಂದಾಯವಾಗಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ₹216.55 ಕೋಟಿ ಬಾಕಿ ಇದೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ₹86.75 ಕೋಟಿ, ಅಥಣಿ ಶುಗರ್ಸ್‌, ಬೆಲಗಾಮ್‌ ಶುಗರ್ಸ್‌ ಸುಮಾರು ₹13 ಕೋಟಿ, ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ, ಸತೀಶ ಶುಗರ್ಸ್‌, ಸಂಗಮ ಸಕ್ಕರೆ ಕಾರ್ಖಾನೆ, ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ, ವಿಶ್ವರಾಜ್‌ ಶುಗರ್ಸ್‌ಗಳು ತಲಾ ₹20 ಕೋಟಿ ಬಾಕಿ ಉಳಿಸಿಕೊಂಡಿವೆ.

ಉಳಿದಂತೆ ಬೀದರ್‌ ಜಿಲ್ಲೆಯಲ್ಲಿ ₹75 ಕೋಟಿ, ಬಾಗಲಕೋಟೆ ಜಿಲ್ಲೆಯಲ್ಲಿ ₹39 ಕೋಟಿ ಮತ್ತು ವಿಜಯಪುರ ಜಿಲ್ಲೆಯಲ್ಲಿನ ಕಾರ್ಖಾನೆಗಳು ₹16 ಕೋಟಿ ಬಾಕಿ ಉಳಿಸಿಕೊಂಡಿವೆ.

ಈಗಾಗಲೇ ಶೇ 97ರಷ್ಟು ಹಣ ಪಾವತಿಯಾಗಿದೆ. ಮೇ 31ರೊಳಗೆ ಉಳಿದ ಹಣ ಪಾವತಿಸ ಬೇಕಿದೆ. ಬಾಕಿ ಉಳಿಸಿದರೆ ಕಾರ್ಖಾನೆಗೆ ನೋಟಿಸ್‌ ನೀಡಲಾಗುವುದು.
ಎಂ.ಆರ್‌. ರವಿಕುಮಾರ್‌, ಸಕ್ಕರೆ ಆಯುಕ್ತ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.