ಬೆಂಗಳೂರು: 65 ವರ್ಷ ವಯೋಮಿತಿ ದಾಟಿರುವ ಮಾಲೀಕರನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ವಿವರ ಸಂಗ್ರಹಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
ಪಡಿತರ ವಿತರಿಸುವಲ್ಲಿ ಐದುದಶಕಗಳಿಗೂ ಹೆಚ್ಚು ಅವಧಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಿಸುತ್ತಾ ಬಂದಿದ್ದಾರೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಚೀಟಿಗಳನ್ನು ಹೊಂದಿರುವ 1.26 ಕೋಟಿ ಕುಟುಂಬಗಳಿಗೆ ಪಡಿತರ ವಿತರಿಸುತ್ತಿದ್ದಾರೆ.
ಒಮ್ಮೆ ಪರವಾನಗಿ ಪಡೆದನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ಮೂರು ವರ್ಷಗಳಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕಿತ್ತು. ವಯೋಮಿತಿ ಇರಲಿಲ್ಲ. ಅವರ ಮರಣಾ ನಂತರ ಕುಟುಂಬದ ಅರ್ಹ ಸದಸ್ಯರ ಹೆಸರಿಗೆ ಪರವಾನಗಿ ವರ್ಗಾಯಿಸುವ ಪರಿಪಾಟಇದುವರೆಗೂ ಬೆಳೆದುಕೊಂಡು ಬಂದಿತ್ತು. ಆ ಮೂಲಕ ಪಡಿತರ ವಿತರಣೆಯ ಕಾಯಕವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಆ ಕುಟುಂಬಗಳಿಗೆ ಸರ್ಕಾರ ಜೀವನ ಭದ್ರತೆ ಒದಗಿಸಿತ್ತು.
ಪಡಿತರ ವಿತರಣೆಯಲ್ಲಿ ಆನ್‌ಲೈನ್ ವ್ಯವಸ್ಥೆ, ಬಯೊಮೆಟ್ರಿಕ್ ಅಳವಡಿಕೆಯ ನಂತರ ನ್ಯಾಯಬೆಲೆ ಅಂಗಡಿ ಮಾಲೀಕರು ಲ್ಯಾಪ್‌ಟಾಪ್ ಬಳಸುವುದನ್ನು ಕಡ್ಡಾಯಗೊಳಿಸಲಾಯಿತು. ಬಹುತೇಕ ಮಾಲೀಕರು 60ರ ವಯೋಮಿತಿ ದಾಟಿದ್ದರಿಂದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂದು ನಿರ್ಧರಿಸಿದ ಸರ್ಕಾರ ಅನುಕಂಪದ ಆಧಾರದಲ್ಲಿ ಪರವಾನಗಿ ವರ್ಗಾವಣೆ ಮಾಡುವ ನಿಯಮಗಳಿಗೆ ತಿದ್ದುಪಡಿ ತಂದು 2017ರಲ್ಲೇ ಹೊಸ ಆದೇಶ ಹೊರಡಿಸಿತ್ತು. ಸರ್ಕಾರ ಈ ನಿರ್ಧಾರದ ವಿರುದ್ಧ ರಾಜ್ಯ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ ಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಈಚೆಗೆ ತಡೆಯಾಜ್ಞೆ ತೆರವಾಗಿದ್ದು, ಸರ್ಕಾರದ ತಿದ್ದುಪಡಿ ಆದೇಶವನ್ನು ಎತ್ತಿಹಿಡಿದಿದೆ. ಬೆನ್ನಲ್ಲೇ ವಿವರ ಸಂಗ್ರಹಿಸಲು ಸರ್ಕಾರದ ಆದೇಶ ಹೊರಬಿದ್ದಿದೆ.
‘ಪಡಿತರ ವಿತರಣೆಯ ಕಮಿಷನ್ ಹೆಚ್ಚಿಸಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದರೆ
ವಯೋಮಿತಿಯ ನೆಪ ಇಟ್ಟುಕೊಂಡು ಸಾವಿರಾರು ಪರವಾನಗಿ ರದ್ದುಪಡಿಸಲು ಸರ್ಕಾರ ಹೊರಟಿದೆ. ಶಾಸಕರ ಹಿಂಬಾಲಕರಿಗೆ, ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಕುತಂತ್ರ ಉದ್ದೇಶದ ಹಿಂದಿದೆ’ ಎಂದು ಆರೋಪಿಸುತ್ತಾರೆ ನ್ಯಾಯಬೆಲೆ ಅಂಗಡಿಯ ಮಾಲೀಕ ರೇವಣಸಿದ್ದಪ್ಪ.
2 ಸಾವಿರ ಪರವಾನಗಿ ನವೀಕರಣ ಬಾಕಿ
ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಪಡಿತರ ವಿತರಣಾ ಕೇಂದ್ರಗಳಿವೆ. 1999ರ ನಂತರ ಹೊಸ ನ್ಯಾಯ ಬೆಲೆ ಅಂಗಡಿಗಳನ್ನು ತೆರೆಯಲು ಸಹಕಾರ ಸಂಘಗಳಿಗೆ, ಸ್ತ್ರಿಶಕ್ತಿ ಸಂಘಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಹಳೆಯ ನ್ಯಾಯಬೆಲೆ ಅಂಗಡಿಗಳ ಖಾಸಗಿ ಮಾಲೀಕತ್ವ ಅವರ ಬಳಿಯೇ ಇತ್ತು. ಮಾಲೀಕರು ಮೃತಪಟ್ಟಿರುವ 2 ಸಾವಿರಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು2017ರ ನಂತರ ಸರ್ಕಾರ ನವೀಕರಿಸಿಲ್ಲ. ಅಂತಹ ಪಡಿತರ ಚೀಟಿಗಳನ್ನು ಸಮೀಪದ ಮತ್ತೊಂದು ಅಂಗಡಿಗೆ ಹೆಚ್ಚುವರಿ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.