ADVERTISEMENT

ಪ್ರವಾಸೋದ್ಯಮಕ್ಕಾಗಿ 680 ಎಕರೆ ಭೂಮಿ ಮಾರಾಟ

₹7,800 ಕೋಟಿ ಹೂಡಿಕೆ ಆಕರ್ಷಣೆಯ ಗುರಿ* ನೂತನ ನೀತಿಯಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 0:02 IST
Last Updated 30 ಅಕ್ಟೋಬರ್ 2024, 0:02 IST
<div class="paragraphs"><p>ಜಮೀನು</p></div>

ಜಮೀನು

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದ ವಿವಿಧೆಡೆ ಪ್ರವಾಸೋದ್ಯಮ ಇಲಾಖೆಯ ಒಡೆತನದಲ್ಲಿರುವ 680 ಎಕರೆ ಭೂಮಿಯನ್ನು ಮಾರಾಟ ಮಾಡಿ ಅದರಿಂದ ಸಿಗುವ ಹಣವನ್ನು ಪ್ರವಾಸೋದ್ಯಮ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

ADVERTISEMENT

ರಾಜ್ಯ ಸರ್ಕಾರ ಪ್ರಕಟಿಸಿರುವ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಈ ಅಂಶವು ಒಳಗೊಂಡಿದ್ದು, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀತಿಗೆ ಒಪ್ಪಿಗೆ ನೀಡಲಾಗಿದೆ.

ಅಲ್ಲದೇ, ಪ್ರವಾಸೋದ್ಯಮ ಸ್ವತ್ತುಗಳ ಬ್ಯಾಂಕ್‌ (ಟೂರಿಸಂ ಅಸೆಟ್‌ ಬ್ಯಾಂಕ್) ಸೃಷ್ಟಿಸಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಮೌಲ್ಯವುಳ್ಳ ಮತ್ತು ಪ್ರವಾಸೋದ್ಯಮ ಆಸಕ್ತ ಸ್ವತ್ತುಗಳ ಬ್ಯಾಂಕ್‌ ಅಗತ್ಯವಿದೆ. ಇವುಗಳನ್ನು ಆಧರಿಸಿ ಪ್ಯಾಕೇಜ್‌ ಪ್ರವಾಸವನ್ನು ರೂಪಿಸಲು ಉದ್ದೇಶಿಸಲಾಗಿದೆ.

ದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲೇ ಮೊದಲ ಮೂರು ರಾಜ್ಯಗಳ ಪೈಕಿ ಒಂದಾಗುವುದು (48 ಕೋಟಿ ಪ್ರವಾಸಿಗರು), ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿ ಐದು ರಾಜ್ಯಗಳ ಪೈಕಿ ಒಂದಾಗುವ (20 ಲಕ್ಷ ಪ್ರವಾಸಿಗರು) ಗುರಿ ಹೊಂದಲಾಗಿದೆ. 47 ಸಾವಿರ ಜನರಿಗೆ ನೇರ ಉದ್ಯೋಗ, 1 ಲಕ್ಷ ಜನರಿಗೆ ಪರೋಕ್ಷ ಮತ್ತು ಪ್ರೇರಿತ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ₹7,800 ಕೋಟಿ ಹೂಡಿಕೆ ಆಕರ್ಷಿಸಲಾಗುವುದು. 

‘ಒಂದು ಜಿಲ್ಲೆ ಒಂದು ತಾಣ’ ಯೋಜನೆಯಡಿ ಪ್ರತಿ ಜಿಲ್ಲೆಗೆ ಒಂದರಂತೆ ಕನಿಷ್ಠ 30 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ಕನಿಷ್ಠ 50 ಅಂತರರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮದ ವಿಚಾರ ಪ್ರಚಾರ ಮಾಡಲು ಉದ್ದೇಶಿಸಲಾಗಿದೆ.

ಕೋಮು ಸೌಹಾರ್ದ: ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ಆಧ್ಯಾತ್ಮಿಕ ಯಾತ್ರಾ ತಾಣಗಳ ಪ್ರವಾಸೋದ್ಯಮ ಉತ್ತೇಜಿಸಿ ಧಾರ್ಮಿಕ ವೈವಿಧ್ಯ ಮತ್ತು ಶ್ರದ್ಧಾ ಕೇಂದ್ರಗಳ ಬಗ್ಗೆ ಅರಿವು ಮೂಡಿಸಲಾಗುವುದು. ಕೋಮು ಸೌಹಾರ್ದವನ್ನು ಪರಿಗಣಿಸಿ ರಾಜ್ಯದ ಸಿರಿವಂತ ಆಧ್ಯಾತ್ಮಿಕ ಪರಂಪರೆ ಮುನ್ನೆಲೆಗೆ ತರಲಾಗುವುದು ಎಂಬ
ಅಂಶವನ್ನೂ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.