ADVERTISEMENT

6ನೇ ತರಗತಿ ಪಠ್ಯದಲ್ಲಿ ಯಾಗದ ವಿಡಂಬನೆ: ಪಾಠ ಬೋಧಿಸದಂತೆ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 18:52 IST
Last Updated 26 ಆಗಸ್ಟ್ 2020, 18:52 IST
ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್   

ಉಡುಪಿ: 6ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಯಾಗದ ಕುರಿತಾಗಿರುವ ಪಠ್ಯವು ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ವಿಡಂಬನೆ ಮಾಡುವಂತಿದೆ ಎಂಬ ಟೀಕೆಗಳು ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್, ‘ನಿರ್ಧಿಷ್ಟ ಪಾಠವನ್ನು ಬೋಧನೆ ಮಾಡದಂತೆ ಆದೇಶಿಸಿದ್ದಾರೆ’ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ಈಚೆಗೆ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ‘ಸಮಾಜ ವಿಜ್ಞಾನ ಪುಸ್ತಕದಲ್ಲಿರುವ ಯಾಗದ ಪಠ್ಯ ಕುರಿತು ಮಾತನಾಡಿ, ‘ಎಲ್ಲ ಸಾಧಕರಿಗೂ ಯಾಗದಿಂದಲೇ ಮುಕ್ತಿ ಸಿಗುವುದಿಲ್ಲ ಎಂಬ ವಿಚಾರವನ್ನು 5,000 ವರ್ಷಗಳ ಹಿಂದೆಯೇ ಭಾಗವತದ ಪಠ್ಯದಲ್ಲಿ ಹೇಳಲಾಗಿದೆ. ಹೀಗಿರುವಾಗ ಯಾಗದ ಕುರಿತಾಗಿ ಪಠ್ಯದಲ್ಲಿ ಬರೆದಿರುವ ವಿಚಾರಗಳು ತಪ್ಪು’ ಎಂದು ಅಭಿಪ್ರಾಯಪಟ್ಟಿದ್ದರು. ಈ ವಿಚಾರವನ್ನು ಸಚಿವ ಸುರೇಶ್ ಕುಮಾರ್ ಅವರಿಗೆ ತಿಳಿಸಿದ್ದರು.

ಶ್ರೀಗಳ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ‘ಈ ವರ್ಷ ಯಾವ ಪಠ್ಯಪುಸ್ತಕಗಳು ಪ್ರಕಟವಾಗಿಲ್ಲ. ಮುಂದಿನ ವರ್ಷ ಪುಸ್ತಕ ಪ್ರಕಟವಾಗುವಾಗ ಪಠ್ಯವನ್ನು ತೆಗೆದುಹಾಕಲಾಗುವುದು. ಈಗಾಗಲೇ ಪುಸ್ತಕಗಳನ್ನು ಮುದ್ರಿಸಿ ಮಕ್ಕಳಿಗೆ ತಲುಪಿಸಿರುವುದರಿಂದ ಈಗ ಪಾಠವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ತಿಳಿಸಿರುವುದಾಗಿ’ ಮಠದ ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

‘ಚನ್ನಮ್ಮನ ಇತಿಹಾಸ: ಅಸ್ಪಷ್ಟ ಮಾಹಿತಿ’

ಚನ್ನಮ್ಮನ ಕಿತ್ತೂರು: ‘ಸರ್ಕಾರ ವಿತರಿಸಿರುವ 10ನೇ ತರಗತಿಯ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಅಸ್ಪಷ್ಟ ಮತ್ತು ಆಕ್ಷೇಪಾರ್ಹ ಸಂಗತಿಗಳಿದ್ದು, ಕಿತ್ತೂರು ರಾಣಿ ಚನ್ನಮ್ಮನ ಬಗ್ಗೆ ಅವು ನಿಖರಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿಲ್ಲ’ ಎಂದು ಸಂಶೋಧಕ ಡಾ.ಸಂತೋಷ ಹಾನಗಲ್ಲ ತಿಳಿಸಿದರು.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಮಾಜ ವಿಜ್ಞಾನ ಪುಸ್ತಕದ 1ನೇ ಭಾಗದ 34ನೇ ಪುಟದಲ್ಲಿ ಕಿತ್ತೂರಿನ ಬಂಡಾಯದ ಬಗ್ಗೆ ವಿವರಿಸುವಾಗ ಕಿತ್ತೂರು, ಬೆಳಗಾಂ ಮತ್ತು ಧಾರವಾಡ ಜಿಲ್ಲೆಯ ನಡುವೆ ಇರುವ ಊರು ಎಂದು ನಮೂದಿಸಲಾಗಿದೆ. ಆದರೆ, ಯಾವ ಜಿಲ್ಲೆಯಲ್ಲಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಬೆಳಗಾವಿ ಎಂದು ಅಧಿಕೃತ ನಾಮಕರಣವಾಗಿದ್ದರೂ ಬೆಳಗಾಂ ಎಂದು ಅಲ್ಲಿ ಬರೆಯಲಾಗಿದೆ. ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಒಟ್ಟು 44 ಸದಸ್ಯರಿದ್ದೂ ತಪ್ಪು ಉಳಿದಿರುವುದು ಅಚ್ಚರಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಿತ್ತೂರು ಸಂಸ್ಥಾನದ ಮಾಹಿತಿಗಳನ್ನು ಬಗೆದು ತೆಗೆದಷ್ಟು ಸ್ವಾಭಿಮಾನದ ಹೊಸ ಸಂಗತಿಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಪಠ್ಯವನ್ನು ಪರಿಷ್ಕರಿಸಿ ಸಮರ್ಪಕ, ಸ್ಪಷ್ಟ ಇತಿಹಾಸ ತಿಳಿಸಲು ತಜ್ಞರು ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.