ADVERTISEMENT

700 ಮಂದಿಯ ಲಿಂಗ ಪರಿವರ್ತಿಸಿದ ವೈದ್ಯೆ!

ಬಾಲಕನಿಗೆ ಸೀರೆ ಉಡಿಸಿ ಭಿಕ್ಷಾಟನೆಗೆ ತಳ್ಳಿದ್ದರು...

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:43 IST
Last Updated 18 ಡಿಸೆಂಬರ್ 2018, 19:43 IST
   

ಮಂಡ್ಯ: ಕೆ.ಆರ್‌. ಪೇಟೆ ಪಟ್ಟಣದ ಬಾಲಕನ ಲಿಂಗಪರಿವರ್ತನೆ ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದು ಕುತೂಹಲಕರ ವಿಷಯ ಬೆಳೆಕಿಗೆ ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು 700 ಮಂದಿಗೆ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿರುವುದು ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಕೆ.ಆರ್‌.ಪೇಟೆ ಪೊಲೀಸರು ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಬೆಂಗಳೂರು ನಾಗರಬಾವಿ ಆಸ್ಪತ್ರೆಯೊಂದರಲ್ಲಿ ಬಾಲಕನಿಗೆ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಇದೇ ಆಸ್ಪತ್ರೆಯ ವೈದ್ಯೆ ಕಳೆದ ನಾಲ್ಕೈದು ವರ್ಷಗಳಿಂದ 700 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

‘ಇದರ ಹಿಂದೆ ಒಂದು ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂಬ ವಿಚಾರವನ್ನು ಬಂಧಿತರು ಬಾಯಿಬಿಟ್ಟಿದ್ದಾರೆ. ಸದ್ಯ ಆ ವೈದ್ಯೆ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕ ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ತೆರಳಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಕೆ.ಆರ್‌.ಪೇಟೆಗೆ ತೆರಳಲು ಪಾಂಡವಪುರಕ್ಕೆ ರೈಲಿನಲ್ಲಿ ಬಂದಿಳಿಯುತ್ತಿದ್ದ ಆತನಿಗೆ ಮಂಗಳಮುಖಿಯರ ಪರಿಚಯವಾಗಿತ್ತು. ಫೆ. 4ರಂದು ಆತ ನಾಪತ್ತೆಯಾಗಿದ್ದ. ಅಕ್ಟೋಬರ್‌ನಲ್ಲಿ ಕೆ.ಆರ್‌.ಪೇಟೆಯಲ್ಲಿ ಪತ್ತೆಯಾಗಿದ್ದು, ತೃತೀಯಲಿಂಗಿಯಾಗಿ ಪರಿವರ್ತನೆಯಾಗಿದ್ದ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಾಲಕನ ಅಜ್ಜಿ ಕೆ.ಆರ್‌.ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.

ಘಟನೆಯ ಬೆನ್ನತ್ತಿದ್ದ ಪೊಲೀಸರಿಗೆ ಲಿಂಗಪರಿವರ್ತನೆಯ ಜಾಲ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಬಾಲಕನಿಗೆ ಸೀರೆ ಉಡಿಸಿ ಭಿಕ್ಷಾಟನೆಗೆ ತಳ್ಳಲಾಗಿತ್ತು. ಆತನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ.

19 ವರ್ಷ ವಯಸ್ಸಿನ ಪ್ರಮಾಣಪತ್ರ:ಬಾಲಕನಿಗೆ 16 ವರ್ಷ ವಯಸ್ಸಾಗಿದೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸುವಾಗ 19 ವರ್ಷ ವಯಸ್ಸಾಗಿದೆ ಎಂದು ನೋಟರಿಯೊಬ್ಬರಿಂದ ಪ್ರಮಾಣಪತ್ರ ಪಡೆಯಲಾಗಿದೆ. ಆದರೆ ಶಾಲಾ ದಾಖಲಾತಿ ಪರಿಶೀಲಿಸಿದಾಗ ಆತನಿಗೆ 16 ವರ್ಷ ಎಂಬುದು ಖಾತ್ರಿಯಾಗಿದೆ.

‘ವಿಚಾರಣೆ ಆರಂಭದಲ್ಲಿ ವೈದ್ಯೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಬಂಧಿಸಬೇಕು ಎನ್ನುವಷ್ಟರಲ್ಲಿ ತಲೆ ಮರೆಸಿಕೊಂಡಿದ್ದಾರೆ. ಬಂಧನಕ್ಕೆ ತಂಡ ರಚಿಸಲಾಗಿದೆ. ವೈದ್ಯೆ ಸಿಕ್ಕಿದರೆ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.