ಬೆಂಗಳೂರು: ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.
‘ಹಲವು ಸಮೀಕ್ಷೆಗಳುಮಕ್ಕಳ ಕಲಿಕಾ ಮಟ್ಟ ಕುಸಿಯುತ್ತಿರುವುದನ್ನು ತಿಳಿಸಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಶ್ನೆಪತ್ರಿಕೆ ತಯಾರಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿದೆ. ಪೂರಕ ಪರೀಕ್ಷೆಗೂ ವ್ಯವಸ್ಥೆ ಮಾಡಲಾಗುತ್ತದೆ. ಪೋಷಕರು, ಶಿಕ್ಷಕರು ಹಾಗೂ ಹಲವು ಸಂಘಟನೆಗಳಿಂದಒತ್ತಾಯ ಕೇಳಿಬಂದಿದ್ದರಿಂದ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
‘ಶಾಲೆ ಆರಂಭವಾಗಿ 4 ತಿಂಗಳಾಯಿತು. ಈ ಹಂತದಲ್ಲಿ ಪರೀಕ್ಷೆಯ ಸೂಚನೆ ನೀಡಿದರೆ ಮಕ್ಕಳಿಗೆ ಗೊಂದಲ ಆಗಬಹುದು. ಈ ಬಾರಿ ಪರೀಕ್ಷೆ ಬೇಡವೇ ಬೇಡ’ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದರೆ ಮಾತ್ರ ಪಾಸು–ಫೇಲು ವ್ಯವಸ್ಥೆಯನ್ನು ಈವರ್ಷದ ಬದಲಿಗೆ ಮುಂದಿನ ವರ್ಷ ಜಾರಿಗೆ ತರಲಾಗುವುದು. ಪಬ್ಲಿಕ್ ಪರೀಕ್ಷೆ ಮಾಡುವುದು ಖಚಿತ’ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಎಸ್ಸೆಸ್ಸೆಲ್ಸಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಅಷ್ಟಾಗಿ ನಡೆದಿಲ್ಲ. 7ನೇ ತರಗತಿಯಲ್ಲಿ ಸಹ ಸೋರಿಕೆ ಆಗದಂತೆ ಕ್ರಮ ಜರುಗಿಸಲಾಗುವುದು. ಮೌಲ್ಯಮಾಪನ, ಪೂರಕ ಪರೀಕ್ಷೆಯ ಬಗ್ಗೆಯೂ ಗಮನ ಹರಿಸಲಾಗಿದೆ. 7ನೇ ತರಗತಿಯಲ್ಲಿ ಫೇಲಾದರೆ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ಸಚಿವರು ವಿವರಿಸಿದರು.
ಪರೀಕ್ಷೆ ನಡೆಸುವುದಕ್ಕೆ ತಜ್ಞರ ಸಮಿತಿ ರಚಿಸಲಾಗುತ್ತದೆ. ಅದಕ್ಕಿಂತ ಮೊದಲಾಗಿ ಸರ್ಕಾರದ ನೀತಿ ಪ್ರಕಟವಾಗಬೇಕಾಗುತ್ತದೆ ಎಂದು ಪ್ರಾಥಮಿಕಶಿಕ್ಷಣ ಇಲಾಖೆಯಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಹೇಳಿದರು.
* ನೂತನ ಶಿಕ್ಷಣ ನೀತಿಯಲ್ಲಿ ಸಹ 5 ಮತ್ತು 8ನೇ ತರಗತಿಗಳಲ್ಲಿ 10ನೇ ತರಗತಿಗೆ ಪೂರಕವಾಗಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಲಾಗಿದೆ
– ಡಾ. ಎಂ. ಕೆ. ಶ್ರೀಧರ್, ಶಿಕ್ಷಣ ತಜ್ಞ
* ವರ್ಷದ ಮಧ್ಯಭಾಗದಲ್ಲಿ ಕೈಗೊಂಡ ಈ ನಿರ್ಧಾರದಿಂದ ಮಕ್ಕಳು ಗಲಿಬಿಲಿಗೊಳ್ಳುತ್ತಾರೆ. ಮುಂದಿನ ಜೂನ್‌ನಲ್ಲಿತೀರ್ಮಾನ ಮಾಡುವುದು ಉತ್ತಮ
– ವಿ. ಎಂ. ನಾರಾಯಣ ಸ್ವಾಮಿ, ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
* ಶಾಲೆಗಳಿಗೆ ಇನ್ನೂ ಸರಿಯಾಗಿ ಪುಸ್ತಕವನ್ನೇ ಪೂರೈಸಿಲ್ಲ. ವರ್ಷದ ಮಧ್ಯಭಾಗದಲ್ಲಿ ಸರ್ಕಾರ ಇಂತಹ ಆಘಾತ ನೀಡಿದರೆ ಮಕ್ಕಳು ತಯಾರಾಗುವುದಾದರೂ ಹೇಗೆ?
– ಶ್ರೀನಿವಾಸ್, 7ನೇ ತರಗತಿ ವಿದ್ಯಾರ್ಥಿನಿಯ ಪೋಷಕ, ನೆಲಮಂಗಲ
50 ಮೀರಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗ ಇಲ್ಲ
50 ವರ್ಷ ಮೀರಿದ ಶಿಕ್ಷಕಿಯರಿಗೆ ಹಾಗೂ 55 ವರ್ಷ ಮೀರಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
‘ಈ ಬಾರಿಯ ಕಡ್ಡಾಯ ವರ್ಗಾವಣೆಗೊಂಡವರಿಗೆ ಮುಂದಿನ ವರ್ಗಾವಣಾ ಪ್ರಕ್ರಿಯೆಗೆ ಮೊದಲೇ ಲಭ್ಯ ಇರುವ ಖಾಲಿ ಹುದ್ದೆಗಳಿಗೆ ಅನುಸಾರವಾಗಿ ಒಂದು ಬಾರಿ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು. ‘ಸಿ’ ವಲಯದಲ್ಲಿ ಯಾರಾದರೂ 15 ವರ್ಷ ಸೇವೆ ಸಲ್ಲಿಸಿದ್ದರೆ ಅವರಿಗೆ ಮತ್ತೆ ‘ಸಿ’ ವಲಯಕ್ಕೆ ವರ್ಗಾವಣೆ ಮಾಡುವುರಿಂದ ವಿನಾಯಿತಿ, ಶೇ 20ರಷ್ಟು ಖಾಲಿ ಹುದ್ದೆ ಇರುವ ಕಡೆಯಿಂದ ಇದುವರೆಗೆ ವರ್ಗಾವಣೆ ಕೊಡುತ್ತಾ ಇರಲಿಲ್ಲ, ಅದನ್ನು ಶೇ 25ಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದರು.
ಶಿಕ್ಷಕಿ ಬುದ್ಧಿಮಾಂದ್ಯ ಮಗುವಿನ ತಾಯಿ ಆಗಿದ್ದರೆ ಆಕೆಗೆ ಹಾಗೂ ವಿಚ್ಛೇದಿತಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಚಿಂತನೆಯೂ ಇದೆ. ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ತಾಲ್ಲೂಕಿನೊಳಗೆ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಜಿಲ್ಲೆಯೊಳಗಷ್ಟೇ ವರ್ಗಾವಣೆ ಮಾಡುವ ಪ್ರಸ್ತಾವವೂ ಇದೆ. ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಇನ್ನಷ್ಟು ಚರ್ಚೆ ಬಾಕಿ ಇದೆ. ಕಾಯ್ದೆಗೆ ತಿದ್ದುಪಡಿ ತಂದು ಮುಂದಿನ ವರ್ಷ ಇದು ಅನುಷ್ಠಾನಕ್ಕೆ ಬರಲಿದೆ. ‘ಕಡ್ಡಾಯ ವರ್ಗಾವಣೆ’ಯನ್ನು ಇನ್ನು ‘ವಿಶೇಷ ವರ್ಗಾವಣೆ’ ಎಂಬುದಾಗಿ ಕರೆಯಲಾಗುವುದು. ಶಿಕ್ಷಕ ಸ್ನೇಹಿ ವರ್ಗಾವಣೆ ಕ್ರಮ ಜಾರಿಗೆ ತರುವುದೇ ಸರ್ಕಾರದ ಉದ್ದೇಶ. ಸಾರ್ವಜನಿಕರು, ಶಿಕ್ಷಕರ ಅಭಿಪ್ರಾಯವನ್ನೂ ಆಹ್ವಾನಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.