ಬೆಂಗಳೂರು: ಲಂಬಾಣಿ ತಾಂಡಾಗಳು, ಭೋವಿ ಹಟ್ಟಿಗಳು ಸೇರಿದಂತೆ ರಾಜ್ಯದ ವಿವಿಧೆಡೆಯ 803 ಜನವಸತಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಅವರು, ‘1,400 ಜನವಸತಿಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. 803 ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಜನವಸತಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಆದೇಶ ಹೊರಡಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.
ಜನವಸತಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ಇದ್ದರೆ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಪಡೆಯುವುದು ಸುಲಭ. ಮೂಲಸೌಕರ್ಯ ಒದಗಿಸುವುದಕ್ಕೂ ಅನುಕೂಲವಾಗುತ್ತದೆ. ಈ
ವಿಚಾರವನ್ನು ರಾಜ್ಯ ಸರ್ಕಾರ ಆದ್ಯತೆಯ ಕೆಲಸವನ್ನಾಗಿ ಪರಿಗಣಿಸಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಣಿಗಾರನಕಟ್ಟೆ– ಹೊಸದೊಡ್ಡಿ ತಾಂಡಾದ ಜನರ ಮನೆಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಣೆಗೆ ಪರಿಶೀಲನೆ ನಡೆಯುತ್ತಿದೆ. ದಾಳನಕಟ್ಟೆ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲಾಗಿದೆ. ಬಸವಗೌಡನ
ದೊಡ್ಡಿಯನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದರು.
‘ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಲಂಬಾಣಿ ತಾಂಡಾ ಮತ್ತು ಭೋವಿ ಹಟ್ಟಿಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಇಲ್ಲ. ಈ ಎಲ್ಲ ಜನವಸತಿಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು’ ಎಂದು ರಾಥೋಡ್ ಆಗ್ರಹಿಸಿದರು.
ತಡೆಯಾಜ್ಞೆ ತೆರವಿಗೆ ಪ್ರಯತ್ನ: ಜೆಡಿಎಸ್‌ನ ಕಾಂತರಾಜ್ ಪ್ರಶ್ನೆಗೆ ಉತ್ತರಿಸಿದ ಅಶೋಕ, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳ ನೋಂದಣಿ ಕುರಿತ ವ್ಯಾಜ್ಯ ಸುಪ್ರೀಂಕೋರ್ಟ್‌ನಲ್ಲಿದೆ. ಇದರಿಂದ ಕಂದಾಯ ನಿವೇಶನಗಳ ನೋಂದಣಿ ಮತ್ತು ಅನಧಿಕೃತ ಬಡಾವಣೆಗಳ ಸಕ್ರಮಕ್ಕೆ ಕಾನೂನು ತೊಡಕು ಉಂಟಾಗಿದೆ. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನಗಳ ನೋಂದಣಿಗೆ ಇ–ಸ್ವತ್ತು ಕಡ್ಡಾಯಗೊಳಿಸಲಾಗಿದೆ. ಕಂದಾಯ ನಿವೇಶನಗಳ ನೋಂದಣಿಯಲ್ಲಿ ಅಕ್ರಮ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಈ ಆದೇಶ ಹಿಂಪಡೆಯುವ ಪ್ರಸ್ತಾವವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.