ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ಮುಂಬೈ ವಿಧಾನಸಭೆಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸದಾಶಿವರಾವ್ ಭೋಸ್ಲೆ 95ರ ವಯಸ್ಸಿನಲ್ಲಿಯೂ ನೂಲು ತೆಗೆದು ಜೀವನ ಸಾಗಿಸುತ್ತಿದ್ದಾರೆ.
ಯುವಕರಿದ್ದಾಗಲೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾಗಿ, ಖಾದಿ ಮೇಲೆ ಪ್ರೀತಿ ಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಸದಾಶಿವರಾವ್ ಮೂಲತಃ ಶ್ರೀಮಂತ ಮನೆತನದಲ್ಲಿ ಜನಿಸಿದ್ದರೂ ಎಲ್ಲವನ್ನೂ ತೊರೆದು, ಸರಳ ಜೀವನ ನಡೆಸುತ್ತ ಇತರರಿಗೆ ಮಾದರಿಯಾಗಿದ್ದಾರೆ.
ಬೆಳಗಾವಿಯ ಕಡೋಲಿ ಗ್ರಾಮದ ಇವರು ಯರವಾಡ ಜೈಲಿನಲ್ಲಿ 18 ತಿಂಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭವೂ ಒಂದು ವರ್ಷ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ.
ಒಟ್ಟಾರೆ 45 ವರ್ಷಗಳಿಂದ ಇವರು ತಮ್ಮ ಮನೆಯಲ್ಲಿ ವಾಸವಿಲ್ಲ. ಮೊದಲ ಹದಿನೈದು ವರ್ಷ ಪತ್ನಿಯೊಂದಿಗೆ ಕಡೋಲಿಯ ಮಠದಲ್ಲಿದ್ದ ಅವರು 30 ವರ್ಷಗಳಿಂದಲೂ ದೇವಗಿರಿಯಲ್ಲಿರುವ ‘ಗಾಂಧಿ ಘರ್’ನಲ್ಲಿ ನೆಲೆಸಿದ್ದಾರೆ.
ವಿನೋಬಾ ಭಾವೆ ಅವರ ಕರೆಗೆ ಓಗೊಟ್ಟು ‘ಭೂದಾನ’ ಚಳವಳಿಗೂ ಧುಮುಕಿ, ರಾಜ್ಯದಾದ್ಯಂತ ಆ ಕುರಿತು ಜಾಗೃತಿ ಮೂಡಿಸಲು ಮುಂದಾದ ಇವರ ಕಿಚ್ಚನ್ನು ನೋಡಿ ಇವರ ತಂದೆ ಬಾಪೂಸಾಹೇಬ 18 ಎಕರೆ ಭೂಮಿಯನ್ನು ದಾನ ನೀಡಿದರು. ಅಲ್ಲದೆ ದೇವಗಿರಿ ಬಳಿ ‘ಗಾಂಧಿ ಘರ್’ ನಿರ್ಮಿಸಲು ಒಂದು ಎಕರೆ ಭೂಮಿಯನ್ನೂ ಪ್ರತ್ಯೇಕವಾಗಿ ದೇಣಿಗೆ ನೀಡಿದ್ದರು.
ಸ್ವಾತಂತ್ರ್ಯಕ್ಕೆ ಮುನ್ನ 1946ರಲ್ಲಿ ಮುಂಬೈ ವಿಧಾನಸಭೆಗೆ ಆಯ್ಕೆಯಾಗಿದ್ದ ಸದಾಶಿವರಾವ್, ನಂತರ 1952ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು.
ಅಂದಾನಪ್ಪ ದೊಡ್ಡಮೇಟಿ, ಎಸ್.ಆರ್. ಕಂಠಿ, ಬಿ.ಡಿ. ಜತ್ತಿ ಅವರಂತಹ ಧೀಮಂತರೊಂದಿಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿದ್ದನ್ನು ಸ್ಮರಿಸುವ ಇವರು, ಅಂತಹ ರಾಜಕಾರಣಿಗಳು ಈಗ ಇಲ್ಲ ಎಂದು ನೋವು ವ್ಯಕ್ತಪಡಿಸುತ್ತಾರೆ.
ಕೃಷಿ ಹಣ ಬೆಳೆಯಲು ಅಲ್ಲ: ‘ಅತಿಯಾಸೆಯೇ ರೈತರ ಆತ್ಮಹತ್ಯೆಗೆ ಕಾರಣ. ಕೃಷಿ ಇರುವುದು ಆಹಾರ ಧಾನ್ಯ ಬೆಳೆಯುವುದಕ್ಕೆ ಎಂಬುದನ್ನು ಮರೆತು, ಹಣ ಬೆಳೆಯುವುದಕ್ಕೆ ಎಂದು ಭಾವಿಸಿರುವುದು ರೈತರ ಸಮಸ್ಯೆಗೆ ಮೂಲ ಕಾರಣ. ರೈತರು ಕಬ್ಬು, ಹತ್ತಿ ಬೆಳೆಯುವ ಬದಲು ಆಹಾರ ಉತ್ಪನ್ನಕ್ಕೆ ಆದ್ಯತೆ ನೀಡಬೇಕು. ದುಡ್ಡನ್ನು ತಿನ್ನಲು ಆಗುವುದಿಲ್ಲ. ಹಸಿವಿಗೆ ಆಹಾರವನ್ನೇ ಸೇವಿಸಬೇಕು ಎಂಬುದನ್ನು ಮರೆಯಬಾರದು’ ಸದಾಶಿವರಾವ್ ಸಲಹೆ.
*
ಮದುವೆಯಾಗಿ 65 ವರ್ಷ ಕಳೆದಿದೆ. ಮೊದಲ 20 ವರ್ಷ ಇವರೊಂದಿಗೆ ಮನೆಯಲ್ಲಿದ್ದೆ. ಸಮಾಜಸೇವೆ ನನಗೂ ಹಿಡಿಸಿದ್ದರಿಂದ ಮನೆ ಬಿಟ್ಟು ಬಂದಿದ್ದೇವೆ.
– ವತ್ಸಲಾ ಭೋಸ್ಲೆ
ಸದಾಶಿವರಾವ್ ಅವರ ಪತ್ನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.