ADVERTISEMENT

ದೇಶದ ಶೇ 99 ಮುಸ್ಲಿಮರು ಹಿಂದೂಗಳು: ಅಬ್ದುಲ್‌ ಅಜೀಂ

ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 20:18 IST
Last Updated 20 ಡಿಸೆಂಬರ್ 2019, 20:18 IST
   

ಬೆಂಗಳೂರು: ‘ದೇಶದಲ್ಲಿ ಇರುವ ಶೇ 99ರಷ್ಟು ಭಾರತೀಯ ಮುಸ್ಲಿಮರು ಹಿಂದೂಗಳೇ. ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ (ಸಿಎಎ) ಅವರು ಆತಂಕಪಡುವ ಅಗತ್ಯವೇ ಇಲ್ಲ’ ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಹೇಳಿದರು.

‘ಲಾಯರ್ಸ್‌ ಫಾರ್‌ ನೇಷನ್’ ಸಂಸ್ಥೆಯು ನಗರದಲ್ಲಿ ಶುಕ್ರವಾರ ‘ಪೌರತ್ವ ತಿದ್ದುಪಡಿ ಕಾಯ್ದೆ ಪ್ರಚಾರ ಮತ್ತು ವಾಸ್ತವ’ ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಉತ್ತರ ಭಾರತದ ಕೆಲವು ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿರಬಹುದು. ದಕ್ಷಿಣ ಭಾರತದ ಮುಸ್ಲಿಮರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದವರು. ಮಹಮ್ಮದ್‌ ಅಲಿ ಜಿನ್ನಾ ಇಲ್ಲಿನ ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದಾಗ, ಇಲ್ಲಿರುವ ಮುಸ್ಲಿಮರು ಈ ದೇಶ ನಮ್ಮದು. ಇದು ನಮಗೆ ಅನ್ನ ಕೊಟ್ಟಿದೆ. ಇಲ್ಲಿಯೇ ಇರುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂಬುದಾಗಿ ಹೇಳಿದ್ದರು’ ಎಂದರು.

‘ಸಿಎಎ ಬಗ್ಗೆ ಭಾರತೀಯ ಮುಸ್ಲಿಮರಲ್ಲಿ ವಿನಾಕಾರಣ ಆತಂಕ ಸೃಷ್ಟಿಸಲಾಗುತ್ತಿದೆ. ನಿಮ್ಮನ್ನು ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುತ್ತದೆ, ನಿಮ್ಮ ಬಳಿ ಜನನ ದಾಖಲೆ ಇರದಿದ್ದರೆ ನಿಮ್ಮನ್ನು ಕ್ಯಾಂಪ್‌ಗಳಲ್ಲಿ ಕೂಡಿ ಹಾಕುತ್ತಾರೆ ಎಂದೆಲ್ಲ ಸುಳ್ಳು ಹೇಳಿ ಭೀತಿ ಹುಟ್ಟಿಸಲಾಗುತ್ತಿದೆ. ಸಿಎಎ ಕರಡು ಓದದೇ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ, ಕಾನೂನನ್ನು ಅರ್ಥವೇ ಮಾಡಿಕೊಂಡಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಭಾರತೀಯ ಮುಸ್ಲಿಮರು ಈ ದೇಶದ ಪೌರರು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ಸಿಗುತ್ತವೆ’ ಎಂದು ಅವರು ಹೇಳಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ, ‘ಬಹುಮತ ಹೊಂದಿರುವ ಸಂಸತ್ತಿನಲ್ಲಿ ಪೌರತ್ವ ಕಾಯ್ದೆ ಪಾಸಾಗಿದೆ. ರಾಷ್ಟ್ರಪತಿ ಅಂಕಿತವೂ ಸಿಕ್ಕಿದೆ. ಈಗ ಅದು ಈ ನೆಲದ ಕಾನೂನು. ಎಲ್ಲರೂ ಅದನ್ನು ಗೌರವಿಸಲೇಬೇಕು. ಅದು ಬಿಟ್ಟು ರಸ್ತೆಯಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ’ ಎಂದರು.

‘ಕಾಯ್ದೆಯ ಕುರಿತು ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಇದರ ಬಗ್ಗೆ ಏನೇ ಆಕ್ಷೇಪಣೆಗಳು ಅಥವಾ ಸಲಹೆ ಇದ್ದರೆ ಅಲ್ಲಿ ಪ್ರಶ್ನಿಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.