ಬೆಂಗಳೂರು: ರಾಜ್ಯ ಪಠ್ಯಕ್ರಮದ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ‘ವೀರಶೈವ’ ಪದ ಕೈಬಿಟ್ಟಿರುವುದಕ್ಕೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪಠ್ಯದಲ್ಲಿನ ಹಲವು ತಪ್ಪುಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ವೀರಶೈವ ಪದ ತೆಗೆದುಹಾಕಿರುವುದು ಸರಿಯಲ್ಲ, ಸಂಶೋಧಕ ಎಂ.ಎಂ. ಕಲಬುರಗಿ ಅವರು ಪ್ರಧಾನವಾಗಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟದಲ್ಲಿನ ವಚನಗಳನ್ನು ಅವಲೋಕಿಸಿದರೆ ಬಸವಣ್ಣ ಸೇರಿದಂತೆ 30ಕ್ಕೂ ಹೆಚ್ಚು ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದ ಬಳಕೆ ಮಾಡಿದ್ದಾರೆ. 10 ವಚನಗಳಲ್ಲಿ 21 ಕಡೆ ಮಾತ್ರ ಲಿಂಗಾಯತ ಪದ ಬಳಕೆ ಮಾಡಿದ್ದಾರೆ. ಆದರೆ, ಬಸವಣ್ಣ ಒಂದು ವಚನದಲ್ಲೂ ಲಿಂಗಾಯತ ಪದ ಬಳಕೆ ಮಾಡಿಲ್ಲ. ಒಂದು ವಚನದಲ್ಲಿ ತಾವು ನಿಜ ವೀರಶೈವ ಎಂದು ಉಲ್ಲೇಖಿಸಿದ್ದಾರೆ ಎಂದು ವಿವರ ನೀಡಿದ್ದಾರೆ.
ಅಲ್ಲದೇ ಬಸವಣ್ಣ ‘ಅರಿವನ್ನೇ ಗುರು’ ವಾಗಿಸಿಕೊಂಡಿದ್ದರು ಎಂದಿದೆ. ಇಂದು ಸಂಪೂರ್ಣ ತಪ್ಪು ಮಾಹಿತಿ. ಅವರು ಪ್ರತಿಯೊಬ್ಬರ ಅಂತರಂಗದಲ್ಲಿರುವ ಪರಮಾತ್ಮನ ಅರಿವೇ ಗುರುವಾಗಿರಬೇಕು ಎಂದಿದ್ದಾರೆ. ಹೀಗಾಗಿ, ಇಂತಹ ಎಲ್ಲ ತಪ್ಪುಗಳನ್ನು ಸರಿಪಡಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.