ADVERTISEMENT

ಶ್ರೀಮಂತರ ಒತ್ತುವರಿ ಮುಟ್ಟದ ಅರಣ್ಯ ಇಲಾಖೆ: ಆರೋಪ

ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 16:27 IST
Last Updated 5 ಅಕ್ಟೋಬರ್ 2024, 16:27 IST
<div class="paragraphs"><p>ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿಯು ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಸಿರಿಮನೆ ನಾಗರಾಜ್‌ ಮಾತನಾಡಿದರು</p></div>

ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿಯು ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಸಿರಿಮನೆ ನಾಗರಾಜ್‌ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಶ್ರೀಮಂತರು ದೊಡ್ಡ ಮಟ್ಟದಲ್ಲಿ ಮಾಡಿಕೊಂಡಿರುವ ಒತ್ತುವರಿಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ವಹಿಸದೇ, ಜೀವನೋಪಾಯಕ್ಕಾಗಿ ಕೃಷಿ ಮಾಡುತ್ತಿರುವ ಬಡವರನ್ನು ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಈ ಬಗ್ಗೆ ಶನಿವಾರ ಶಾಸಕರ ಭವನದಲ್ಲಿ ಸಭೆ ನಡೆಸಿದರು.

ಒತ್ತುವರಿದಾರರ ಪಟ್ಟಿಯಲ್ಲಿ ದೊಡ್ಡ ಉದ್ಯಮಿಗಳ, ರಾಜಕಾರಣಿಗಳ ಹೆಸರೇ ಇರುವುದಿಲ್ಲ. ಬದುಕುವುದಕ್ಕಾಗಿ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದವರ, ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರ ಹೆಸರು ಇದೆ. ನಮೂನೆ 50, 53, 57ರಲ್ಲಿ ಸಕ್ರಮಗೊಂಡು ಸಾಗುವಳಿ ಚೀಟಿ ಹೊಂದಿವವರೂ ಪಟ್ಟಿಯಲ್ಲಿದ್ದಾರೆ. 4 ಎಕರೆ 95 ಸೆಂಟ್ಸ್‌ ಭೂ ಮಿತಿಯಲ್ಲಿ ಇವೆಲ್ಲ ಹಲವು ವರ್ಷಗಳ ಹಿಂದೆಯೇ ಸಕ್ರಮವಾಗಿದ್ದವು. ಈಗ ಸಾಗುವಳಿ ಚೀಟಿ ಇದ್ದೂ ಪ್ರಯೋಜನವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಲೆನಾಡು ಮಲೆನಾಡಿಗರದ್ದಾಗಿದ್ದು, ಐಷರಾಮಿ ಜೀವನ ನಡೆಸುವವರಿಗೆ, ಕಾರ್ಪೊರೇಟರ್‌ಗಳಿಗೆ. ಶ್ರೀಮಂತರಿಗೆ ಸೇರಿದ್ದಲ್ಲ. ನಗರದಲ್ಲಿದ್ದುಕೊಂಡು ಪ್ರವಾಸ ಬಂದು ಹೋಗುವವರದ್ದೂ ಅಲ್ಲ. ಶೇ 95ರಷ್ಟು ಪರಿಸರ ನಾಶ ಆಗಿರುವುದು ಇಂಥವರಿಂದಲೇ ಹೊರತು, ಮಲೆನಾಡಿಗರಿಂದಲ್ಲ. ಪರಿಸರ ನಾಶಕ್ಕೆ ಸರ್ಕಾರದ ಅಭಿವೃದ್ಧಿ ನಿಯಮ ಮತ್ತು ಅದರ ಹಿಂದೆ ಇರುವ ಬಂಡವಾಳಶಾಹಿಗಳೇ ಕಾರಣ ಎಂದು ಆರೋಪಿಸಿದರು.

ಒಂದು ಎಕರೆಯಲ್ಲಿ 25ಕ್ಕಿಂತ ಅಧಿಕ ಮರಗಳಿದ್ದರೆ ಅರಣ್ಯ ಎಂಬ ನಿಯಮವೇ ಸರಿ ಇಲ್ಲ. ಈ ನಿಯಮ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯೂ ಅರಣ್ಯ ಇಲಾಖೆಗೆ ಸೇರಬೇಕಾಗುತ್ತದೆ. ಮಲೆನಾಡಿನಲ್ಲಿ ಎಲ್ಲರ ಜಮೀನಲ್ಲೂ ಎಕರೆಗೆ 25ಕ್ಕೂ ಅಧಿಕ ಮರಗಳಿರುತ್ತವೆ. ಕಾಫಿ, ಅಡಿಕೆ ಮರಗಳನ್ನೆಲ್ಲ ಅರಣ್ಯ ಎಂದು ಗುರುತಿಸುವುದು ಬಿಡಬೇಕು ಎಂದು ಆಗ್ರಹಿಸಿದರು.

ಜೀವನೋಪಾಯ ನಡೆಸುವುದಕ್ಕೆ ಒತ್ತುವರಿಯ ಹಣೆಪಟ್ಟಿ ಕಟ್ಟಬಾರದು. ವೈಜ್ಞಾನಿಕ ಮಾನದಂಡಗಳನ್ನು ಹಕ್ಕು ಪತ್ರಗಳನ್ನು ವಿತರಿಸಬೇಕು. ಹಕ್ಕು ಪತ್ರಗಳ ವಿತರಣೆಗೆ ತಡೆಯಾಗಿರುವ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕು. ನಗರ ಕೇಂದ್ರಿತ ಪರಿಸರವಾದಿಗಳೇ ಜಾಸ್ತಿ ಇದ್ದಾರೆ. ಲಾಭವೆಲ್ಲ ನಗರಪ್ರದೇಶದವರಿಗೆ. ಅತಂತ್ರ ಆಗುತ್ತಿರುವುದಷ್ಟೇ ಮಲೆನಾಡಿಗರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಕಾಯ್ದೆಗಳು, ಭೂಮಿತಿ ಕಾಯ್ದೆಗಳು ಇವೆಲ್ಲವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಸ್ಥಳೀಯ ಜನಪ್ರತಿನಿಧಿಗಳು, ಮಲೆನಾಡಿನ ಪರಿಸರ ತಜ್ಞರು, ಜನರನ್ನು ಒಳಗೊಂಡ ಒಂದು ಸಮಿತಿ ರಚಿಸಬೇಕು. ಮಲೆನಾಡಿನ ಜನರ ಭೂಮಿ, ವಸತಿ ಹಕ್ಕನ್ನು ನಿರಾಕರಿಸುವ ಸೆಕ್ಷನ್‌ 4 ಹಾಗೂ ಪರಿಭಾವಿತ (ಡೀಮ್ಡ್‌) ಅರಣ್ಯ ಕಾಯ್ದೆಯನ್ನು ರದ್ದುಗೊಳಿಸಬೇಕು. ಜನರನ್ನು ಒಳಗೊಂಡು ಪರಿಸರ ಉಳಿಸುವ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಅತ್ತಿಕುಳಿ ಸುಂದರೇಶ್, ಕಾರ್ಯದರ್ಶಿ ಪ್ರಸನ್ನ ಕುಮಾರ್‌ ಕಿಬ್ಲಿ, ಸಂಚಾಲಕ ಕೆ.ಎಲ್‌. ಅಶೋಕ, ವಿವಿಧ ಸಂಘಟನೆಗಳ ಮುಖಂಡರಾದ ಸಿರಿಮನೆ ನಾಗರಾಜ, ವಿ.ಎನ್. ಶ್ರೀಧರ್‌, ರಾಮು ಕೋಲಿ, ಸುರೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.