ADVERTISEMENT

ದ್ವಿತೀಯ ಪಿಯುಸಿ ಪುನರಾವರ್ತಿತರಿಗೆ ಕೃಪಾಂಕ? ಶಿಕ್ಷಣ ಇಲಾಖೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 19:44 IST
Last Updated 4 ಜುಲೈ 2021, 19:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿರುವ ಪುನರಾವರ್ತಿತ ವಿದ್ಯಾರ್ಥಿಗಳನ್ನು ಕೃಪಾಂಕ ನೀಡಿ ತೇರ್ಗಡೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಒಂದೆರೆಡು ದಿನದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅವರ ಪ್ರಥಮ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದಲ್ಲಿ ತೇರ್ಗಡೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಅಲ್ಲದೆ, ಫಲಿತಾಂಶ ನೀಡಲು ಅನುಸರಿಸಬೇಕಾದ ಮಾನದಂಡದ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿಯನ್ನು ಇಲಾಖೆ ರಚಿಸಿದೆ.

ಈ ನಡುವೆ, ಪುನರಾವರ್ತಿತ ಅಭ್ಯರ್ಥಿಗಳನ್ನು ತೇರ್ಗಡೆ ಮಾಡುವ ಬಗ್ಗೆ ಅಭಿಪ್ರಾಯ ನೀಡುವಂತೆ ಸರ್ಕಾರವನ್ನು ಹೈಕೋರ್ಟ್‌ ಕೇಳಿತ್ತು. ಹೀಗಾಗಿ, ಪುನರಾವರ್ತಿತ ಅಭ್ಯರ್ಥಿಗಳಿಗೆ ಕೃಪಾಂಕ ನೀಡಿ ಅಥವಾ ಹಿಂದಿನ ತರಗತಿಯ ಫಲಿತಾಂಶದ ಆಧಾರದಲ್ಲಿ ತೇರ್ಗಡೆ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪುನರಾವರ್ತಿತ ಅಭ್ಯರ್ಥಿಗಳಲ್ಲಿ ಒಂದು ಅಥವಾ ಎರಡನೇ ಬಾರಿ ಪರೀಕ್ಷೆ ಬರೆಯುವವರ ಮಾಹಿತಿ ಇಲಾಖೆಗೆ ಸುಲಭವಾಗಿ ಸಿಗಲಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯು ಇಲಾಖೆ ಡಿಜಿಟಲೀಕರಣಕ್ಕೆ ಒಳಗೊಳ್ಳುವ ಮೊದಲಿನ ಅಭ್ಯರ್ಥಿಗಳಾಗಿದ್ದರೆ, ಅವರ ಹಿಂದಿನ ಫಲಿತಾಂಶದ ಆಧಾರದಲ್ಲಿ ತೇರ್ಗಡೆ ಮಾಡುವುದು ಕಷ್ಟ. ಹೀಗಾಗಿ, ಕೃಪಾಂಕ ನೀಡಿ ತೇರ್ಗಡೆ ಮಾಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದು, ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.