ಧಾರವಾಡ: ‘ತಾಳೆಗರಿಗಳಲ್ಲಿ ಜೀರ್ಣಾವಸ್ಥೆಯಲ್ಲಿದ್ದ ವಚನಗಳನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ಡಾ.ಫ.ಗು.ಹಳಕಟ್ಟಿ ಅವರ ಕಾರ್ಯಕ್ಕೆ ಸಮಸ್ತ ಕನ್ನಡ ನಾಡು ಕೃತಜ್ಞವಾಗಿದೆ’ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ. ಫ.ಗು.ಹಳಕಟ್ಟಿ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಳೆಗರಿಗಳಲ್ಲಿ ಮಾತ್ರ ದಾಖಲಾಗಿದ್ದ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ ಅಮೂಲ್ಯ ವಚನ ಭಂಡಾರವನ್ನು ಕನ್ನಡ ನಾಡಿಗೆ ನೀಡಿ ಉಪಕರಿಸಿದ್ದಾರೆ. ಅತ್ಯಮೂಲ್ಯ ವಚನ ಸಾಹಿತ್ಯದ ಆಶಯಗಳನ್ನು ಇಂದಿನ ಹಾಗೂ ಹೊಸಪೀಳಿಗೆಯಲ್ಲಿ ಬಿತ್ತಿ ಬೆಳೆಸಬೇಕು’ ಎಂದರು.
ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಮಾತನಾಡಿ, ‘ಡಾ. ಹಳಕಟ್ಟಿ ಅವರು ಶ್ರಮಿಸದೇ ಹೋಗಿದ್ದರೆ ಕನ್ನಡ ನಾಡು ಹಾಗೂ ಜಗತ್ತಿನ ಅಮೂಲ್ಯವಾದ ವಚನ ಸಾಹಿತ್ಯವು ಈಗಿನ ಮುದ್ರಿತ ರೂಪದಲ್ಲಿ ಸಿಗುತ್ತಿರಲಿಲ್ಲ. ಇಂಥ ವಚನ ಸಾಹಿತ್ಯದಲ್ಲಿ ಜಗತ್ತಿನ ಎಲ್ಲ ಮಾನವರ, ಜೀವಿಗಳ ಕಲ್ಯಾಣದ ಆಶಯ ವಚನ ಸಾಹಿತ್ಯದಲ್ಲಿದೆ. ಅವರ ಪ್ರಯತ್ನದಿಂದಾಗಿ ವಚನ ಸಾಹಿತ್ಯವು ಭಾರತದ 30 ಭಾಷೆಗಳಿಗೆ ಅನುವಾದಗೊಂಡಿದೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಝ ಹೂಗಾರ ಮಾತನಾಡಿ, ‘ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ರಾಜ್ಯ ಮಟ್ಟದ ಮೊಟ್ಟಮೊದಲ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಮಹಾಪುರಷರ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಯಂತಿಗಳು ಸಹಕಾರಿ. 12ನೇ ಶತಮಾನದಲ್ಲಿ ನಡೆದ ಮಹಾಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯವನ್ನು 20ನೇ ಶತಮಾನದಲ್ಲಿ ಮನೆಮನೆಗೆ ತೆರಳಿ ಸಂಗ್ರಹಿಸಿ ಮಹಾನ್ ಕಾರ್ಯ ಮಾಡಿದ ಡಾ. ಹಳಕಟ್ಟಿ ಅವರು ಜಾಗತಿಕ ಮನ್ನಣೆಗೆ ಪಾತ್ರರು.ಬಸವಣ್ಣನವರ ಪ್ರತಿರೂಪದಂತಿದ್ದ ಹಳಕಟ್ಟಿಯವರು ತಮ್ಮ ಮನೆ, ಆಸ್ತಿ ಮಾರಾಟ ಮಾಡಿ, ಸೈಕಲ್ ತುಳಿದು ತಮ್ಮ ಜೀವ ಸವೆಸಿ ವಚನಗಳನ್ನು ಸಂಗ್ರಹಿಸಿದ ಕೆಲಸ ಸದಾ ಸ್ಮರಣೀಯ’ ಎಂದರು.
ಇದೇ ಸಂದರ್ಭದಲ್ಲಿ ‘ವಚನ ಸಂಶೋಧನ ಪಿತಾಮಹ ಡಾ. ಫ.ಗು.ಹಳಕಟ್ಟಿ’ ಎಂಬ ಕೃತಿಯನ್ನು ಸಾಹಿತಿ ಡಾ. ವೀರಣ್ಣ ರಾಜೂರ ಬಿಡುಗಡೆ ಮಾಡಿದರು. ತಹಶೀಲ್ದಾರ್ ಸಂತೋಷ ಹಿರೇಮಠ, ಹಿರಿಯ ಗಾಯಕ ಡಾ. ಎಂ.ವೆಂಕಟೇಶ ಕುಮಾರ, ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಈಶ್ವರ ಕಡ್ಲಿಮಟ್ಟಿ, ಸದಾನಂದ ಹಳಕಟ್ಟಿ, ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಇದ್ದರು.
ಹೊಸಯಲ್ಲಾಪುರದ ಶುಕ್ರವಾರಪೇಟೆಯಲ್ಲಿರುವ ಡಾ. ಫ.ಗು.ಹಳಕಟ್ಟಿ ಅವರು ಜನಿಸಿದ ಮನೆ ‘ವಚನ’ದಿಂದ ಆರಂಭಗೊಂಡ ಮೆರವಣಿಗೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕರಡಿ ಮಜಲು, ಮಹಿಳೆಯರ ಡೊಳ್ಳು ಕುಣಿತ, ಜಗ್ಗಲಗಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.