ನವದೆಹಲಿ: ಛತ್ತೀಸಗಢ ವಿಧಾನಸಭೆಯ 90 ಕ್ಷೇತ್ರಗಳ ಪೈಕಿ 75ರಲ್ಲಿ ಗೆಲ್ಲುವ ಗುರಿ ಇರಿಸಿಕೊಂಡಿರುವ ಕಾಂಗ್ರೆಸ್, ಉತ್ತಮ ಸಾಧನೆ ಮಾಡದ ಕೆಲವು ಶಾಸಕರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ.
ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿಯು ಗುರುವಾರ ಸಂಜೆ ಸಭೆ ಸೇರಲಿದೆ. ಎಲ್ಲ 90 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಛತ್ತೀಸಗಢ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಸ್ತಾರ್ ಹಾಗೂ ಅಕ್ಕಪಕ್ಕದ ಪ್ರದೇಶಗಳ 20 ಕ್ಷೇತ್ರಗಳಿಗೆ ನವೆಂಬರ್ 7ರಂದು ಮತದಾನ ನಡೆಯಲಿದೆ. ಉಳಿದ 70 ಕ್ಷೇತ್ರಗಳಿಗೆ ನವೆಂಬರ್ 17ರಂದು ಮತದಾನವಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕುಮಾರಿ ಸೆಲ್ಜಾ, ‘2018ರ ಚುನಾವಣೆಯಲ್ಲಿ ಪಕ್ಷವು 68 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಸಲ 75 ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಶಾಸಕರ ವೈಯಕ್ತಿಕ ಸಾಧನೆಯನ್ನು ಪರಿಗಣಿಸುತ್ತೇವೆ. ನಾವು ನೆಲದ ಧ್ವನಿಯನ್ನು ಕೇಳುತ್ತೇವೆ. ನಾವು ಪ್ರತಿ ಕ್ಷೇತ್ರದ ಸನ್ನಿವೇಶವನ್ನು ಆಳವಾಗಿ ಅಧ್ಯಯನ ನಡೆಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ’ ಎಂದರು.
ಕೆಲವು ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಟಿಕೆಟ್ ಹಂಚಿಕೆಗೆ ಅರ್ಹತೆಯೇ ಮಾನದಂಡವಾಗಿರಲಿದೆ. ಪಕ್ಷದಲ್ಲಿ ಮಹಿಳೆಯರು ಸೇರಿದಂತೆ ಉತ್ತಮ ನಾಯಕರ ಕೊರತೆ ಇಲ್ಲ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕಳೆದ ಐದು ವರ್ಷಗಳಿಂದ ಸರ್ಕಾರದ ಚುಕ್ಕಾಣಿ ಹಿಡಿದಿರುವುದರಿಂದ ಪಕ್ಷದ ಪ್ರಚಾರವನ್ನು ಮುನ್ನಡೆಸಲಿದ್ದಾರೆ ಎಂದು ಸೆಲ್ಜಾ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.