ADVERTISEMENT

ಗೃಹಲಕ್ಷ್ಮಿಗೆ ವರ್ಷ | ₹25 ಸಾವಿರ ಕೋಟಿ ಜಮೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 5:16 IST
Last Updated 31 ಆಗಸ್ಟ್ 2024, 5:16 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಬಡವರ ಪಾಲಿನ ನಂದಾದೀಪವಾದ ‘ಗೃಹಲಕ್ಷ್ಮಿ’ ಯೋಜನೆಗೆ ವರ್ಷ ತುಂಬಿದ್ದು, ಒಂದು ವರ್ಷದಲ್ಲಿ ಮನೆಯ ಯಜಮಾನಿಯರಿಗೆ ₹25,248 ಕೋಟಿ ಜಮೆ ಮಾಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

‘2023 ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆಗ ವಿರೋಧ ಪಕ್ಷಗಳು ಘೋಷಣೆಗಳು ಘೋಷಣೆಗಳಾಗಿಯೇ ಉಳಿಯಲಿವೆ ಎಂದು ಗೇಲಿ ಮಾಡಿದ್ದವು. ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತು ತಪ್ಪುವುದಿಲ್ಲ ಎಂಬುದು ಜನರಿಗೆ ಗೊತ್ತಿತ್ತು. ನಮ್ಮನ್ನು ನಂಬಿಯೇ 136 ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟರು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅಧಿಕಾರಕ್ಕೆ ಬಂದ ತಕ್ಷಣವೇ ನಮ್ಮ ಸರ್ಕಾರ ಜನರಿಗೆ ನೀಡಿದ್ದ ವಾಗ್ದಾನದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆವು. ಅದರಲ್ಲಿ ಗೃಹ ಲಕ್ಷ್ಮಿಯೂ ಒಂದು. ಈ ಯೋಜನೆ ಜಾರಿ ಬಂದು ಆ.30 ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ’ ಎಂದಿದ್ದಾರೆ.

‘ಈ ಯೋಜನೆಯಿಂದ ಮನೆಯ ಯಜಮಾನಿಯರು ಆರ್ಥಿಕವಾಗಿ ಸಬಲರಾಗಿದ್ದು ಮಾತ್ರವಲ್ಲದೇ ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ. ಕಳೆದ ವರ್ಷ ರಾಜ್ಯವನ್ನು ಕಾಡಿದ ಭೀಕರ ಬರಗಾಲದಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಯಾವುದೇ ತೊಂದರೆ ಇಲ್ಲದೇ ಸುಸೂತ್ರವಾಗಿ ಸಂಸಾರ ನಡೆಸಿದ್ದಾರೆ ಎಂದರೆ ಅದಕ್ಕೆ ಗೃಹ ಲಕ್ಷ್ಮಿಯೇ ಸಾಕ್ಷಿ’ ಎಂದು ಶಿವಕುಮಾರ್‌ ಹೇಳಿದ್ದಾರೆ.

‘ಈವರೆಗೆ ರಾಜ್ಯದಲ್ಲಿ 1 ಕೋಟಿ 23 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು ₹2,000 ದಂತೆ ತಿಂಗಳಿಗೆ ₹2,280 ಕೋಟಿ ಹಣವನ್ನು ವರ್ಗಾವಣೆ ಮಾಡುವ ಮೂಲಕ ಕಳೆದ 1 ವರ್ಷದಲ್ಲಿ ಒಟ್ಟು ₹25,248 ಕೋಟಿಯನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ’ ಎಂದು ವಿವರಿಸಿದರು.

‘ಈ ಯೋಜನೆಯ ಹಣ ಅನೇಕರಿಗೆ ನಾನಾ ರೀತಿಯ ನೆರವಿಗೆ ಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಪ್ರಿಡ್ಜ್‌ ಖರೀದಿಸಿದರೆ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಜಯಪುರದ ಬಾಲಕ ತನ್ನ ವ್ಯಾಸಂಗಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಯಿತು ಎಂದು ಹೇಳಿದ್ದನ್ನು ಕೇಳಿ ಸಾರ್ಥಕತೆಯ ಭಾವನೆ ಮನದಲ್ಲಿ ಮೂಡಿತು’ ಎಂದು ಶಿವಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.