ADVERTISEMENT

ಆಕಾಶವಾಣಿ: ಹೊಸ ನಿಯಮ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 20:28 IST
Last Updated 17 ಏಪ್ರಿಲ್ 2021, 20:28 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   

ಬೆಂಗಳೂರು: ‘ಕೇವಲ ನಿರ್ವಹಣಾ ವೆಚ್ಚದ ಕಾರಣ ನೀಡಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಾದೇಶಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಸರಿಯಾದ ಕ್ರಮವಲ್ಲ. ಪ್ರಸಾರ ಭಾರತಿಯು ಕೂಡಲೇ ಹೊಸ ನಿಯಮವನ್ನು ಹಿಂಪಡೆಯಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಒತ್ತಾಯಿಸಿದ್ದಾರೆ.

ಈ ಸಂಬಂಧ ಆಕಾಶವಾಣಿ ನಿಲಯ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ‘ದಕ್ಷಿಣದ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಇಲ್ಲದ ನಿಯಮಗಳನ್ನು ಕರ್ನಾಟಕದ ಮೇಲೆ ಹೇರಿ, ಏ.13ರಿಂದ ಹೊಸ ನೀತಿಯನ್ನು ಜಾರಿಮಾಡಿರುವುದು ನಿಯಮಬಾಹಿರ. ಕೂಡಲೇ ಈ ನೀತಿಯನ್ನು ಪರಿಷ್ಕರಿಸಿ, ಈ ಮೊದಲಿನಂತೆ ಆಕಾಶವಾಣಿಯಲ್ಲಿ ಹೆಚ್ಚಿನ ಸಮಯ ಕನ್ನಡದ ಕಾರ್ಯಕ್ರಮಗಳು ಪ್ರಸಾರವಾಗುವಂತೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರಸಾರ ಭಾರತಿ ಜಾರಿಗೆ ತಂದಿರುವ ಹೊಸನೀತಿ, ನಿಯಮಗಳಿಂದಾಗಿ ಇದುವರೆಗೂ ನಿರಂತರವಾಗಿ ಬಿತ್ತರವಾಗುತ್ತಿದ್ದ ಪ್ರಾದೇಶಿಕ ಕಾರ್ಯಕ್ರಮಗಳು ಸ್ಥಗಿತಗೊಳ್ಳಲಿವೆ. ಇದರಿಂದಾಗಿ ಸ್ಥಳೀಯ ಕಲಾವಿದರಿಗೆ ಮತ್ತು ಜಿಲ್ಲಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳೀಯ ಉದ್ಯೋಗಿಗಳ ಬದುಕು ಡೋಲಾಯಮಾನವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾದೇಶಿಕತೆಯ ಅಸ್ಮಿತೆಯನ್ನು ಪ್ರಶ್ನಿಸಿದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಅಡ್ಡಿ’

‘ಆಕಾಶವಾಣಿಯಲ್ಲಿ ಕನ್ನಡ ಹಾಗೂ ಕರ್ನಾಟಕದ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳನ್ನು ಬಿತ್ತರಿಸುವ ಬಗ್ಗೆ ಪ್ರಸಾರ ಭಾರತಿ ಜಾರಿಗೆ ತಂದಿರುವ ನೀತಿಯು ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಆತಂಕ ಒಡ್ದುವಂತಿದೆ. ಕನ್ನಡದ ಕಾರ್ಯಕ್ರಮಗಳ ಪ್ರಸಾರದ ಸಮಯವೂ ಅವೈಜ್ಞಾನಿಕವಾಗಿ ಬದಲಾಗಿದೆ. ಆಕಾಶವಾಣಿಯನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡುವ ಪ್ರಸಾರ ಭಾರತೀಯ ಹೊಸ ಪ್ರಸಾರ ನೀತಿಯು ಕನ್ನಡಿಗರಿಗೆ ತುಂಬಾ ನಿರಾಸೆ ಉಂಟು ಮಾಡಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.

‘ಆಕಾಶವಾಣಿಯಲ್ಲಿನ ಕನ್ನಡ ಭಾಷಾ ಕಾರ್ಯಕ್ರಮಗಳ ಅಭಿಮಾನಿಗಳ ಅಭಿಪ್ರಾಯಗಳನ್ನು ಮನ್ನಿಸಿ ಈ ತಿಂಗಳಿಂದ ಜಾರಿಗೆ ಬಂದಿರುವ ಪ್ರಾದೇಶಿಕ ಕಾರ್ಯಕ್ರಮಗಳ ಪ್ರಸಾರದ ನೀತಿಯನ್ನು ಹಿಂಪಡೆಯಬೇಕು. ಈ ಬಗ್ಗೆ ಪ್ರಸಾರ ಭಾರತಿಯ ಮುಖ್ಯಸ್ಥರಿಗೆ ಸ್ಥಳೀಯ ಬೆಂಗಳೂರು ಆಕಾಶವಾಣಿಯ ನಿರ್ದೇಶಕರು ಕೂಡಲೇ ಪತ್ರದ ಮೂಲಕ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.