ADVERTISEMENT

ತೆರಿಗೆ ಹಂಚಿಕೆ ತಾರತಮ್ಯ: ಪ್ರಧಾನಿ ಮೋದಿಗೆ ಎಎಪಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:34 IST
Last Updated 9 ಫೆಬ್ರುವರಿ 2024, 15:34 IST
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು   

ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರದ ಒಟ್ಟಾರೆ ತೆರಿಗೆ ಆದಾಯಕ್ಕೆ ಕರ್ನಾಟಕ ಶೇ 8ರಷ್ಟು ಕೊಡುಗೆ ನೀಡಿದ್ದರೂ, ಹಣಕಾಸು ಹಂಚಿಕೆಯಲ್ಲಿ ಶೇ 3.64 ಮಾತ್ರ ಪಡೆಯುತ್ತಿದ್ದೇವೆ. ರಾಜ್ಯದ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಪರಿಸ್ಥಿತಿಗಳಿಗೆ ವಿಶೇಷ ಗಮನ ನೀಡಬೇಕು. ಉತ್ತರ ಕರ್ನಾಟಕದ ಹಲವು ಪ್ರದೇಶಗಳು ಇನ್ನೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿವೆ. ಈ ಜಿಲ್ಲೆಗಳನ್ನು ತ್ವರಿತವಾಗಿ ರಾಷ್ಟ್ರೀಯ ಸರಾಸರಿಗೆ ತರಲು ಹಣಕಾಸು ಹಂಚಿಕೆಯಲ್ಲಿ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿರುವ ಉತ್ತರ ಕರ್ನಾಟಕದ ಭಾಗಗಳು ಸತತ ಬರ, ನೈಸರ್ಗಿಕ ವಿಕೋಪಗಳಿಂದ ಮತ್ತಷ್ಟು ಆರ್ಥಿಕ ಕುಸಿತ ಕಂಡಿವೆ. ಕೇಂದ್ರದ ಹಂಚಿಕೆ ಹೆಚ್ಚಿಸದ ಹೊರತು ಅಭಿವೃದ್ಧಿ ಮಾಡುವುದು ಸವಾಲಾಗಿದೆ. 2015-2020ರಲ್ಲಿ ಶೇ 4.71 ಇದ್ದ ಹಂಚಿಕೆ, 2020-2025ರ ವೇಳೆಗೆ ಶೇ 3.64ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.  

ADVERTISEMENT

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ₹18,177 ಕೋಟಿ ಕೇಳಿದೆ. ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. 15ನೇ ಹಣಕಾಸು ಆಯೋಗದಿಂದ ವಿಶೇಷ ಅನುದಾನ ₹5,495 ಕೋಟಿ ಸಹ ಬಂದಿಲ್ಲ. ಸಹಕಾರಿ ಯೋಜನೆಗಳ ಅನುದಾನ ₹33 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಯ ₹5,300 ಕೋಟಿ, ಪರಿಷ್ಕೃತ ತೆರಿಗೆ ಪಾಲಿನ ಕೊರತೆ  ₹62,098 ಕೋಟಿ ಬರಬೇಕಿದೆ. ಪಕ್ಷ ರಾಜಕಾರಣ, ಅನುದಾನ ಹಂಚಿಕೆ ವಿಳಂಬ ರಾಜ್ಯದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.