ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಯಾವುದೇ ಯೋಜನೆಗಳಿಗೆ ಅನುದಾನ ನೀಡಿಲ್ಲವೆಂದು ಆರೋಪಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಳಸಾ ಬಂಡೂರಿ, ಮಹದಾಯಿ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಮತ್ತು ಮೇಕೆದಾಟು ಅಂತಹ ಪ್ರಮುಖ ನೀರಾವರಿ ಯೋಜನೆಗಳಿಗೆ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ. ರಾಜ್ಯಕ್ಕೆ ಏನು ಸಿಗುತ್ತದೆ ಎಂಬ ಕುತೂಹಲದಲ್ಲಿದ್ದ ಮತದಾರರಿಗೆ ನಿರ್ಮಲಾ ಸೀತಾರಾಮನ್ ಅವರು ಚೊಂಬು ಕೊಟ್ಟಿದ್ದಾರೆ’ ಎಂದು ಎಎಪಿ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ದೂರಿದರು.
‘ನಮ್ಮ ಮೆಟ್ರೊ ಕಾಮಗಾರಿ, ರೈಲ್ವೆ ಯೋಜನೆಗಳಿಗೂ ಅನುದಾನ ನೀಡಿಲ್ಲ. ಬೆಂಗಳೂರು ಉಪನಗರ ರೈಲು ಯೋಜನೆಗೆ ಮಾತ್ರ ₹350 ಕೋಟಿ ನೀಡಿದ್ದಾರೆ. ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ 19 ಮಂದಿ ಎನ್‌ಡಿಎ ಸಂಸದರು ನಾಲಾಯಕ್‌ಗಳಾಗಿದ್ದಾರೆ. ಅವರಿಗೆ ಒಂದು ರೂಪಾಯಿ ತರಲೂ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಅನುದಾನ ನೀಡದಿದ್ದರೂ ರಾಜ್ಯಕ್ಕೆ ಹಣ ಬರುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ರಾಜ್ಯಕ್ಕೆ ಬೇಕಾಗುವಷ್ಟು ಹಣವನ್ನು ನಿಮ್ಮ ಮನೆಯಿಂದ ತಂದುಕೊಡುತ್ತೀರಾ’ ಎಂದು ಪ್ರಶ್ನಿಸಿದರು.
‘ರಾಜ್ಯಕ್ಕೆ ನೆರೆ ಬಂದಾಗ ನಾವು ಬೇಡಿಕೊಂಡರೂ ಹಣ ಬಿಡುಗಡೆ ಮಾಡಲಿಲ್ಲ. ಈಗ ಬೇರೆ ರಾಜ್ಯಗಳಿಗೆ ವಿಪತ್ತು ನಿಧಿ ಹೆಸರಿನಲ್ಲಿ ₹11 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ. ಯಾವ ರಾಜ್ಯದವರು ಬಿಜೆಪಿಯನ್ನು ತಿರಸ್ಕರಿಸಿದ್ದಾರೋ ಅವರಿಗೆ ಈ ಬಜೆಟ್‌ನಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಎಎಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸತೀಶ್ ಕುಮಾರ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.