ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ದೆಹಲಿಯ ವಿಜಯಚೌಕ್‌ನಲ್ಲಿ ನಡೆಸುವ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಜನವರಿ 29ರಂದು ನಡೆಯುವ ಬೀಟಿಂಗ್ ರಿಟ್ರೀಟ್‌ನಿಂದ ಗಾಂಧೀಜಿ ಅವರ ನೆಚ್ಚಿನ ʼಅಬೈಡ್ ವಿತ್ ಮಿʼ ಗೀತೆಯನ್ನು ತೆಗೆದುಹಾಕಿರುವುದು ನ್ಯಾಯಯುತ ನಿರ್ಧಾರವಲ್ಲ. 2020ರಲ್ಲೂ ಇದೇ ರೀತಿ ಮಾಡಿ ಜನರ ಒತ್ತಾಯದ ನಂತರ 2021ರಲ್ಲಿ ಮತ್ತೆ ಗೀತೆಯನ್ನು ಸೇರಿಸಿದ್ದ ಕೇಂದ್ರ ಸರ್ಕಾರಕ್ಕೆ ಇನ್ನೂ ತನ್ನ ತಪ್ಪಿನ ಅರಿವಾಗಿಲ್ಲ’ ಎಂದು ಟೀಕಿಸಿದ್ದಾರೆ.
‘ಅಬೈಡ್ ವಿತ್ ಮಿ’ ಗೀತೆಯನ್ನು ತೆಗೆದುಹಾಕಿರುವುದು ಭಾರತದ ಬಹುತ್ವ ಸಂಸ್ಕೃತಿಗೆ ಚ್ಯುತಿ ತರುವ ಯತ್ನವೂ ಹೌದು. ಗಾಂಧೀಜಿ ಅವರು ಸಾಬರಮತಿ ಆಶ್ರಮದಲ್ಲಿ ಮೈಸೂರು ಬ್ಯಾಂಡ್ ನುಡಿಸಿದ ಈ ಗೀತೆಯನ್ನು ಮೊದಲ ಬಾರಿಗೆ ಕೇಳಿ ಇಷ್ಟಪಟ್ಟಿದ್ದರು. ಅಲ್ಲಿಂದ ಈ ಗೀತೆಯು ಸಬರಮತಿಯ ಭಜನಾವಳಿಯಲ್ಲಿ ಸೇರ್ಪಡೆಯಾಗಿದೆ‘ ಎಂದು ಡಿಕೆಶಿ ಹೇಳಿದ್ದಾರೆ.
‘ಗಾಂಧೀಜಿ ಅವರ ಆದರ್ಶಗಳನ್ನು ಪ್ರಚಾರಕ್ಕಷ್ಟೇ ಬಳಸುವ ಕೇಂದ್ರ ಸರ್ಕಾರ ತನ್ನ ಆಚಾರ- ವಿಚಾರಗಳಿಂದ ಅಂತಹ ಆದರ್ಶಗಳನ್ನು ದೂರ ಇಟ್ಟಿದೆ ಎಂಬುದು ಇನ್ನೊಮ್ಮೆ ದೃಢಪಟ್ಟಿದೆ. 1950ರಿಂದಲೂ ನಡೆದುಬಂದಿರುವ ಸಂಪ್ರದಾಯವನ್ನು ಮುರಿಯುವ ಇಂಥ ʼಮನೆ ಮುರುಕʼ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.