ಬೆಂಗಳೂರು: ವಕ್ಫ್ ಮಂಡಳಿ ರದ್ದು ಮಾಡಬೇಕು ಮತ್ತು ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್ ಹೆಸರು ತೆಗೆಸಿ ಹಾಕಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ರೈತರ ಜಮೀನು, ಮಠ, ಮಂದಿರಗಳು ಮತ್ತು ಸಾರ್ವಜನಿಕರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ‘ನಮ್ಮ ಭೂಮಿ ನಮ್ಮ ಹಕ್ಕು’ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬೌರಿಂಗ್ ಆಸ್ಪತ್ರೆಯ 2 ಎಕರೆ ಜಮೀನನ್ನೂ ವಕ್ಫ್ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ಪರಿಶೀಲಿಸಿ, ಬಳಿಕ ಹೋರಾಟ ಮಾಡಿ ಆಸ್ಪತ್ರೆಯ ಆಸ್ತಿ ಉಳಿಸಿದ್ದೆ. ವಕ್ಫ್ ಮಂಡಳಿ ಈಗ ತಿಮಿಂಗಿಲದಂತೆ ಬಡವರ ಜಮೀನು ನುಂಗುತ್ತಿದೆ. ರೈತರು ಕಂಗಾಲಾಗಿ ತಮ್ಮ ಆಸ್ತಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಈಗ ಅಹಿಂದ ನಾಯಕರಾಗಿ ಉಳಿದಿಲ್ಲ. ಅವರೀಗ ಮುಸ್ಲಿಮರ ಚಾಂಪಿಯನ್ ಆಗಲು ಮುಂದಾಗಿದ್ದಾರೆ. ಮಂತ್ರಾಲಯ, ವಿಧಾನಸೌಧ, ವಿಶ್ವೇಶ್ವರಯ್ಯನವರ ಶಾಲೆ, ರೈತರು ಮತ್ತು ಬಡವರ ಜಮೀನು ಉಳಿಸಲು ‘ಸೂಪರ್ ಮ್ಯಾನ್’ ಆಗಿ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಅವರು ತರಲಿರುವ ತಿದ್ದುಪಡಿ ಮಸೂದೆಯಿಂದ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ’ ಎಂದು ಹೇಳಿದರು
ಸಂಸದ ಪಿ.ಸಿ. ಮೋಹನ್, ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಎಸ್.ಆರ್. ವಿಶ್ವನಾಥ್, ಎನ್. ಮುನಿರತ್ನ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
‘ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ವಕ್ಫ್ ಹೆಸರು ಇತ್ತಾ?’
‘ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ವಕ್ಫ್ ಹೆಸರು ಇತ್ತಾ? ಅದರಲ್ಲಿ ಎಲ್ಲೂ ವಕ್ಫ್ ಹೆಸರು ಇಲ್ಲ. ದುರಾದೃಷ್ಟವೆಂದರೆ ಈಗ ಭಾರತದ ಅರ್ಧ ಭಾಗದಷ್ಟು ಜಮೀನು ವಕ್ಫ್ ಹೆಸರಿನಲ್ಲಿದೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕಾನೂನು ಬಾಹಿರವಾಗಿ ಎಲ್ಲರ ಜಮೀನನ್ನೂ ವಕ್ಫ್ ಕಬಳಿಕೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ‘ದೇಶಕ್ಕೆ ಸ್ವಾತಂತ್ರ್ಯ ಬಂದ ಆರಂಭಿಕ ದಿನಗಳಲ್ಲಿ ಸುಮಾರು 10 ಸಾವಿರ ವಕ್ಫ್ ಆಸ್ತಿಗಳು ಇದ್ದವು. ಈಗ ವಕ್ಫ್ ಆಸ್ತಿಗಳ ಸಂಖ್ಯೆ 9.5 ಲಕ್ಷಕ್ಕೆ ಏರಿದೆ. 38 ಲಕ್ಷ ಎಕರೆ ಜಮೀನು ವಕ್ಫ್ ಹೆಸರಿಗೆ ವರ್ಗಾವಣೆ ಆಗಿದೆ. ಇದು ಆತಂಕದ ವಿಚಾರ. ಕಾನೂನುಬಾಹಿರವಾಗಿ ಕಾಯ್ದೆಗಳ ಮೂಲಕ ನಮ್ಮ ರೈತರ ನಮ್ಮ ದೇವಸ್ಥಾನಗಳ ಮಠಗಳ ಜಮೀನನ್ನು ವಕ್ಫ್ ಎಂದು ಘೋಷಿಸುತ್ತಿರುವುದೇ ನಮ್ಮ ತಕರಾರಿಗೆ ಕಾರಣ’ ಎಂದು ಹೇಳಿದರು. ‘ತಮಿಳುನಾಡಿನ ತಿರುಚಂದುರೈ ಎಂಬ ಇಡೀ ಊರೇ ವಕ್ಫ್ ಆಸ್ತಿ ಎಂದು ಪರಿವರ್ತಿಸಲಾಗಿದೆ. ನಮ್ಮಲ್ಲಿ ಚಾಲುಕ್ಯರು ನಿರ್ಮಿಸಿದ ಸೋಮೇಶ್ವರ ದೇಗುಲ ಬೀರೇಶ್ವರ ಸ್ವಾಮಿ ದೇವಸ್ಥಾನಗಳನ್ನು ವಕ್ಫ್‌ಗೆ ಸೇರಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಲಿಂಗಾಯತರಿಗೆ ದಾನ ಕೊಟ್ಟ ಜಮೀನನ್ನೂ ವಕ್ಫ್‌ಗೆ ಸೇರಿಸಲಾಗುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕು’ ಎಂದು ಶೋಭಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.