ಬೆಂಗಳೂರು: ಗುತ್ತಿಗೆ ಅಥವಾ ಟೆಂಡರ್ ಪ್ರಕ್ರಿಯೆಯಡಿ ಚಾಲ್ತಿಯಲ್ಲಿದ್ದ ಮಧ್ಯಸ್ಥಿಕೆ ವ್ಯವಸ್ಥೆಯು ಬೊಕ್ಕಸಕ್ಕೆ ಹೊರೆಯಾಗುತ್ತಿದ್ದನ್ನು ಗಂಭೀರವಾಗಿ ಪರಿಗಣಿಸಿರುವ, ರಾಜ್ಯ ಸರ್ಕಾರ, ಇದಕ್ಕೆ ಅವಕಾಶ ಕಲ್ಪಿಸಿದ್ದ ನಿಬಂಧನೆಯನ್ನು (ಆರ್ಬಿಟ್ರೇಷನ್ ಕಲಂ) ರದ್ದು ಪಡಿಸುವ ನಿರ್ಧಾರ ಕೈಗೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ಇದೇ 16ರಂದು ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಮಧ್ಯಸ್ಥಿಕೆ ನಿಬಂಧನೆಯಿಂದ ಹಲವು ಪ್ರಕರಣಗಳಲ್ಲಿ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಆಗುತ್ತಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದ್ದು, ಆದ್ದರಿಂದ ನಿಬಂಧನೆ ಕೈಬಿಡಲು ತೀರ್ಮಾನಿಸಲಾಗಿದೆ. ಇಲ್ಲಿಯವರೆಗೆ ಮಧ್ಯಸ್ಥಿಕೆ ನಿಬಂಧನೆ ಕಡ್ಡಾಯವಾಗಿತ್ತು ಎಂದು ಅವರು ವಿವರಿಸಿದರು.
ಈ ನಿಬಂಧನೆ ರದ್ದು ಪಡಿಸಿರುವುದರಿಂದ ಗುತ್ತಿಗೆದಾರರು ಮತ್ತು ಟೆಂಡರ್ ಪಡೆದವರು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಲವು ಪ್ರಕರಣಗಳಲ್ಲಿ ಈ ನಿಬಂಧನೆಯನ್ನು ಬಳಸಿಕೊಂಡು ನ್ಯಾಯಾಲಯಗಳ ಮೆಟ್ಟಿಲು ಏರಿದ ಕಾರಣ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಆಗಿತ್ತು. ಅತ್ಯಂತ ಪ್ರಮುಖ ಎನಿಸುವ ಒಂದೆರಡು ಪ್ರಕರಣಗಳಲ್ಲಿ ಮಧ್ಯಸ್ಥಿಕೆಯ ಅಗತ್ಯ ಇದೆ ಎಂದು ಕಂಡುಬಂದರೆ ಕಾನೂನು ಇಲಾಖೆ ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಅವಕಾಶ ಈಗಲೂ ಇದೆ ಎಂದು ಪಾಟೀಲ ಹೇಳಿದರು.
‘ಮಧ್ಯಸ್ಥಿಕೆ ನಿಬಂಧನೆ ಅನ್ವಯ ಈ ಹಿಂದೆ ವ್ಯಕ್ತಿಗಳ ಜತೆ ಸರ್ಕಾರ ರಾಜಿ ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಆದರೆ ಗುತ್ತಿಗೆ ಅಥವಾ ಟೆಂಡರ್ ಪಡೆದವರು ಸಣ್ಣಪುಟ್ಟ ತಕರಾರು ಎತ್ತಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದರು. ಅದು ಸರಿಯಾದ ವ್ಯವಸ್ಥೆಯಲ್ಲ. ಇಂತಹ ನೂರಾರು ಪ್ರಕರಣಗಳು ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇರುವುದರಿಂದ, ನಿಬಂಧನೆ ಮುಂದುವರೆಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ನಿಬಂಧನೆಯು ವ್ಯವಸ್ಥೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ’ ಎಂದು ಅವರು ವಿವರಿಸಿದರು.
ಟೆಂಡರ್ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಲೋಪಗಳನ್ನು ಮುಂದಿಟ್ಟುಕೊಂಡು ಗುತ್ತಿಗೆ/ಟೆಂಡರ್ ಪಡೆದ ಸಂಸ್ಥೆ ಅಥವಾ ವ್ಯಕ್ತಿಗಳು ಮಧ್ಯಸ್ಥಿಕೆ ನಿಬಂಧನೆ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೌಷ್ಠಿಕ ಆಹಾರ ಪೂರೈಕೆ ಗುತ್ತಿಗೆ ಸಂಬಂಧಿಸಿದ ಕ್ರಿಸ್ಟಿ ಪ್ರಕರಣ ಅದಕ್ಕೊಂದು ಉದಾಹರಣೆ. ಈ ಪ್ರಕರಣದಲ್ಲಿ ಸರ್ಕಾರವು ಸುಪ್ರೀಂ ಕೊರ್ಟ್ ಮೋರೆ ಹೋಗಿದ್ದರಿಂದ ₹60 ಕೋಟಿ ಉಳಿಯಿತು ಎಂದು ಪಾಟೀಲ ಹೇಳಿದರು.
ಸರ್ಕಾರ ಹೊರಡಿಸಿದ ಸುತ್ತೋಲೆ (ಸಾಮಾನ್ಯ ನಿಬಂಧನೆಗಳ ಕಾಯ್ದೆ 1897, ಉಪಬಂಧ 21, ಸುತ್ತೋಲೆ ಸಂಖ್ಯೆ 273 ಎಲ್‌ಎಸಿ 2012(ಪಿ) ದಿನಾಂಕ: 10-1-2014)ಯನ್ನು ನ.16ರಿಂದ ಅನ್ವಯಿಸಿ ಹಿಂಪಡೆಯಲಾಗಿದೆ. ಇನ್ನು ಮುಂದೆ ಏನೇ ತಗಾದೆಗಳಿದ್ದರೂ ವಾಣಿಜ್ಯಿಕ ನ್ಯಾಯಾಲಯಗಳಿಗೆ ಹೋಗಬಹುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 1006 ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಉಳಿದಿದ್ದು ಮುಂದಿನ ಮಾರ್ಚ್ 31ರೊಳಗೆ ಆ ಸಂಖ್ಯೆಯನ್ನು ಎರಡು ಅಂಕಿಗೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ನ್ಯಾಯಾಲಯಗಳ ಆದೇಶ ಮತ್ತು ಸೂಚನೆಗಳನ್ನು ಅಧಿಕಾರಿಗಳು ಪಾಲಿಸದ ಕಾರಣ ಹಿಂದೆ 2500ಕ್ಕೂ ಹೆಚ್ಚು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಇದ್ದವು. ಈಗ ಆ ಸಂಖ್ಯೆ 1006ಕ್ಕೆ ಇಳಿದಿದೆ ಎಂದು ಅವರು ವಿವರಿಸಿದರು. ಇತ್ತೀಚೆಗೆ ನಡೆದ ಕಾನೂನು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ವಿವರವಾಗಿ ಚರ್ಚಿಸಲಾಯಿತು. 10 ವರ್ಷಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಏರಿಕೆ ಆಗುತ್ತಿರುವುದು ಆರೋಗ್ಯಕರ ಲಕ್ಷಣವಲ್ಲ. ನ್ಯಾಯಾಲಯಗಳು ಕೊಟ್ಟ ಆದೇಶ ಮತ್ತು ಸೂಚನೆಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ ಎಂಬುದರ ಸೂಚಕವಿದು. ಅಧಿಕಾರಿಗಳು ಕಟ್ಟುನಿಟ್ಟಾಗಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು ಮತ್ತು ಸ್ಪಂದನಶೀಲರಾಗಬೇಕು ಎಂದು ಪಾಟೀಲ ಹೇಳಿದರು. ಆದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮಾರ್ಚ್ 31 ಗುರಿ ನಿಗದಿ ಮಾಡಲಾಗಿದೆ. ಶೇ 99ರಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆಯಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳಿರುವ ಕಾರಣ ಬಿಜೆಪಿ ವಿರುದ್ಧ ಕಾನೂನು ಹೋರಾಟ ಮಾಡಬಹುದೇ ಹೊರತು ಅಲ್ಲಿನ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಆಗುವುದಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರದ ವಿರುದ್ಧ ಇಂತಹ ವಿಚಾರಗಳಲ್ಲಿ ಕಾನೂನು ಸಮರ ಈವರೆಗೆ ನಡೆದಿಲ್ಲ. ನಾವೂ ಕೂಡ ಅಲ್ಲಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.