ADVERTISEMENT

ಗರ್ಭಪಾತ: ಐವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:21 IST
Last Updated 24 ಜೂನ್ 2024, 16:21 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್‌ ವ್ಯಾಪ್ತಿಯ ಆರೋಗ್ಯ ವಸತಿಗೃಹ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದಡಿ ಬಂಧನದಲ್ಲಿರುವ ಐವರು ಆರೋಪಿಗಳ ಸಲ್ಲಿಸಿದ್ದ ಪ್ರತ್ಯೇಕ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರಿನ ಶಾಂತಿನಗರದ ಡಾ.ಎಸ್‌.ಆದರ್ಶ ಹಾಗೂ ಮೈಸೂರು ತಾಲ್ಲೂಕಿನ ಸಾಲುಂಡಿ ಗ್ರಾಮದ ಶಿವಲಿಂಗನಾಯಕ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳು ಹಾಗೂ ಮೇಲುಕೋಟೆ ಹೋಬಳಿಯ ಮಹದೇಶ್ವರಪುರದ ಎಂ.ಎಸ್‌.ಕಿರಣ್‌, ಪಾಂಡವಪುರ ತಾಲ್ಲೂಕು ಹೊಸಕೋಟೆಯ ಎಚ್‌.ಪಿ.ಅಖಿಲೇಶ್‌ ಹಾಗೂ ಕೆ.ಆರ್‌.ಪೇಟೆಯ ಶ್ರುತಿ ಸಲ್ಲಿಸಿದ್ದ ನಿಗದಿತ ಜಾಮೀನು ಅರ್ಜಿಗಳನ್ನು ನ್ಯಾಯಮೂ‌ರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ರಾಹುಲ್‌ ರೈ ಅವರು, ‘ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ನೀಡಿರುವ ಸ್ವಯಂ ಹೇಳಿಕೆ ಅನುಸಾರ ಭ್ರೂಣದ ಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡಿಸಿಕೊಂಡಿರುವ ಹಲವು ಸಂತ್ರಸ್ತೆಯರನ್ನು ಪತ್ತೆ ಮಾಡಿ ಅವರ ಹೇಳಿಕೆ  ಪಡೆಯಬೇಕಿದೆ’ ಎಂದು ವಿವರಿಸಿದರು.

ADVERTISEMENT

ಅಂತೆಯೇ, ‘ಪ್ರಕರಣದ ತನಿಖಾ ವೇಳೆ ಅಮಾನತ್ತುಪಡಿಸಿಕೊಂಡಿರುವ ವೈದ್ಯಕೀಯ ಉಪಕರಣಗಳು, ಔಷಧಿಗಳು, ಚುಚ್ಚುಮದ್ದುಗಳನ್ನು ತಜ್ಞರ ಬಳಿಗೆ ಕಳುಹಿಸಿ ಅವರ ಅಭಿಪ್ರಾಯ ಪಡೆಯಬೇಕಿದೆ. ಭ್ರೂಣ ಲಿಂಗ ಪತ್ತೆ ಮಾಡುವ ಸಲುವಾಗಿ ಆರೋಪಿಗಳು ಬಳಸಿರುವ ಸ್ಕ್ಯಾನಿಂಗ್‌ ಮೆಷಿನ್‌ ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆಯಬೇಕಿದೆ ಮತ್ತು ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷಿದಾರರ ಹೇಳಿಕೆ ಕಲೆ ಹಾಕಬೇಕಿದ್ದು, ಇನ್ನಷ್ಟು ಸಾಕ್ಷ್ಯಾಧಾರ ಸಂಗ್ರಹಿಸಬೇಕಿದೆ. ಆದ್ದರಿಂದ, ಯಾವುದೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದ್ದರು.

ರಾಹುಲ್‌ ರೈ ಅವರ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಜಾಮೀನು ನೀಡುವಂತೆ ಕೋರಿದ ಐವರೂ ಅರ್ಜಿದಾರರ ಪರ ವಕೀಲರ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ‘ಇದೊಂದು ಗಂಭೀರ ಪ್ರಕರಣ. ಆರೋಪಿಗಳ ವಿರುದ್ಧ ಗುರುತರ ಆಪಾದನೆಗಳಿವೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಇನ್ನೂ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹಾಗಾಗಿ, ಇಂತಹ ಪ್ರಕರಣದಲ್ಲಿ; ಅದೂ ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲು ಆಗದು’ ಎಂದು ಖಡಕ್ಕಾಗಿ ಹೇಳಿದೆ.

ಪ್ರಕರಣವೇನು?:  ಆರೋಪಿಗಳ ವಿರುದ್ಧ, ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನಾ ಕಾಯ್ದೆ–2007 ಹಾಗೂ ವೈದ್ಯಕೀಯ ಗರ್ಭಪಾತ ಕಾಯ್ದೆ–1971ರ (ಎಂಟಿಪಿ ಕಾಯ್ದೆ) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.