ಬೆಂಗಳೂರು: ‘ನಮ್ಮ ಸರ್ಕಾರದ ವಿರುದ್ಧ ಮಾಡಿರುವ ಶೇ 40 ಲಂಚದ ಆರೋಪದ ಬಗ್ಗೆ ಇದೇ 23ರ ಬಳಿಕ ಮಾತನಾಡುತ್ತೇನೆ. ಅಲ್ಲಿಯವರೆಗೆ ನಾನು ಮಾತನಾಡುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ವಿಷಯದ ಕುರಿತು ನಮ್ಮ ಪಕ್ಷದ ಅಧ್ಯಕ್ಷರು, ವಿರೋಧಪಕ್ಷದ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ಯಾವುದು ಸತ್ಯ, ಯಾವುದು ಅಸತ್ಯ ಎನ್ನುವ ಬಗ್ಗೆ ಮಾತನಾಡುತ್ತೇನೆ’ ಎಂದರು.
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ನೀಡಿರುವ ಹೇಳಿಕೆ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಯಾರು ಯಾರನ್ನೂ ಖರೀದಿ ಮಾಡಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.