ADVERTISEMENT

ವಿಧಾನಸಭೆಯಲ್ಲಿ ಸಚಿವರ ಗೈರು: ಬಿಜೆಪಿ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 16:16 IST
Last Updated 14 ಡಿಸೆಂಬರ್ 2023, 16:16 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ವಿಧಾನಸಭೆ: ಉತ್ತರ ಕರ್ನಾಟಕದ ಮೇಲಿನ ಚರ್ಚೆಯನ್ನು ಆಲಿಸಲು ಸದನದಲ್ಲಿ ಸಚಿವರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.

ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ ಒಬ್ಬ ಸಚಿವರೂ ಸದನದಲ್ಲಿ ಇರಲಿಲ್ಲ. ಬಿಜೆಪಿಯ ಸಿದ್ದು ಸವದಿ ಮಾತನಾಡಲು ಮುಂದಾದಾಗ, ಸಚಿವರು ಬಂದ ಮೇಲೆ ಮಾತನಾಡುತ್ತೀರೋ ಅಥವಾ ಈಗಲೇ ಮಾತನಾಡುತ್ತೀರೊ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಕೇಳಿದರು. ‘ಈಗಲೇ ಮಾತನಾಡುವೆ’ ಎಂದು ಹೇಳಿದ ಸಿದ್ದು ಸವದಿ ಮಾತು ಆರಂಭಿಸಿದರು. ಆಗ, ಸಚಿವ ಪ್ರಿಯಾಂಕ್ ಖರ್ಗೆ ಸದನಕ್ಕೆ ಬಂದರು.

ADVERTISEMENT

20 ನಿಮಿಷವಾದರೂ ಬೇರೆ ಸಚಿವರು ಬರಲೇ ಇಲ್ಲ. ಆಗ,‘ ಸಚಿವರೇ ಇಲ್ಲ; ಯಾರಿಗಾಗಿ ಮಾತನಾಡಲಿ’ ಎಂದು ಸವದಿ ಪ್ರಶ್ನಿಸಿದರು. ‘ಯಾವ ಸಾಲುಗಳಲ್ಲೂ ಸಚಿವರೇ ಇಲ್ಲ; ಇದು ಇಲ್ಲಗಳ ಸರ್ಕಾರ’ ಎಂದು ಟೀಕಿಸಿದ ಬಿಜೆಪಿಯ ವಿ. ಸುನಿಲ್‌ಕುಮಾರ್‌, ಅಧಿಕಾರಿಗಳ ಗ್ಯಾಲರಿಯಲ್ಲೂ ಯಾರೂ ಇಲ್ಲ ಎಂದು ದೂರಿದರು. 

‘ಚರ್ಚೆಗೆ ತಯಾರಿದ್ದೇವೆ. ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ನಿಮಗೆ ಇಷ್ಟವಿಲ್ಲವೆಂದರೆ ಏನು ಮಾಡುವುದು’ ಪ್ರಿಯಾಂಕ್‌ ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ, ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಉತ್ತರ ಕರ್ನಾಟಕದ ಬಗ್ಗೆ ಸಚಿವರು, ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸಭಾತ್ಯಾಗ ಮಾಡುತ್ತೇವೆ’ ಎಂದು ಹೇಳಿ, ಶಾಸಕರನ್ನು ಕರೆದುಕೊಂಡು ಹೊರನಡೆದರು. 

ಅಷ್ಟೊತ್ತಿಗೆ, ಕೆ.ಎಚ್.ಮುನಿಯಪ್ಪ ಸದನಕ್ಕೆ ಬಂದರು. ‘ಸಚಿವರು ಇದ್ದಾರೆ. ಸಿದ್ದು ಸವದಿಯವರೇ ಮಾತನಾಡುವಾಗಲೇ ನಿಮ್ಮ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರೆ ಹೇಗೆ? ನಿಮ್ಮ ಮಾತಿಗೆ ಪ್ರತಿಭಟನೆಯೇ’ ಎಂದು ಸಭಾಧ್ಯಕ್ಷರು ಕುಟುಕಿದರು.

ಆ ಬಳಿಕ,ಸಚಿವರಾದ ಎಂ.ಸಿ. ಸುಧಾಕರ್‌, ಎನ್. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಕೆ. ವೆಂಕಟೇಶ್‌ ಸದನಕ್ಕೆ ಬಂದರು.

ಸದನಕ್ಕೆ ವಾಪಸ್ ಬಂದ ಬಿಜೆಪಿ ಸದಸ್ಯರು ಮಾತನಾಡಲು ಅವಕಾಶ ಕೋರಿದರು. ‘ಮಾತು ನಿಲ್ಲಿಸಿ ಸಭಾತ್ಯಾಗ ಮಾಡಿದವರು ಮತ್ತೆ ವಾಪಸ್ ಬಂದಾಗ, ಮಾತನಾಡಲು ಅವಕಾಶ ಕೊಡುವುದು ಸತ್ಸಂಪ್ರದಾಯವಲ್ಲ’ ಎಂದು ಕಾಂಗ್ರೆಸ್‌ನ ಬಿ.ಆರ್. ಪಾಟೀಲ ಆಕ್ಷೇಪಿಸಿದರು. ಬಿಜೆಪಿಯವರು ವಾಗ್ವಾದಕ್ಕೆ ಇಳಿದ ಬಳಿಕ ಮಾತನಾಡಿದ ಸಭಾಧ್ಯಕ್ಷರು, ‘ಮಾತನಾಡಲು ಅವಕಾಶ ಕೊಟ್ಟರೆ ಸಭಾತ್ಯಾಗ ಮಾಡುತ್ತೀರಿ; ಈಗ ಮತ್ತೆ ಅವಕಾಶ ಬೇಕೆಂದರೆ ಹೇಗೆ’ ಎಂದು ಪ್ರಶ್ನಿಸಿದರಾದರೂ ಬಳಿಕ ಅವಕಾಶ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.