ಹುಬ್ಬಳ್ಳಿ: ‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ನಾಳೆ( ಎ. 20) ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10 ಗಂಟೆಗೆ ಎಲ್ಲಾ ಜಿಲ್ಲಾ ಕೇಂದ್ರದ ಎದುರು ವಿದ್ಯಾರ್ಥಿಗಳ ಜೊತೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಮತ್ತೆ ಮರುಕಳಿಸಬಾರದು ಎಂದರೆ ಎನ್‌ಕೌಂಟರ್ ಕಾನೂನು ಜಾರಿಗೆ ಬರಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
‘ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದರೆ, ಅದು ಲವ್ ಜಿಹಾದ್ ಎನ್ನುವುದು ಸ್ಪಷ್ಟ. ಫಯಾಜ್‌ನ ಪ್ರೀತಿಯನ್ನು ನೇಹಾ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಅವಳ ಪಾಲಕರು ಅವಳನ್ನು ಎರಡು–ಮೂರು ತಿಂಗಳು ಕಾಲೇಜಿಗೆ ಕಳುಹಿಸಿರಲಿಲ್ಲ. ತನ್ನ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಕೊಲೆ ಅವನು ಮಾಡಿದ್ದಾನೆ. ಆದರೆ, ಜವಾಬ್ದಾರಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿ, ಗೃಹಸಚಿವರು ಅದೊಂದು ಆಕಸ್ಮಿಕ, ವೈಯಕ್ತಿ ಘಟನೆ ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ. ಕೊಲೆ ಮಾಡುವ ಉದ್ದೇಶದಿಂದಲೇ ಅವನು ಚಾಕು ತಂದಿದ್ದು’ ಎಂದು ಹೇಳಿದರು.
‘ಆರೋಪಿ ಫಯಾಜ್, ನೇಹಾಳಿಗೆ ಚಾಕು ಇರಿದು ಓಡಿ ಹೋಗುವಾಗ ಅವಳ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಸ್ಥಳೀಯ ಪೊಲೀಸರು ಅವರಿಗೆ ತಪ್ಪು ಮಾಹಿತಿ ನೀಡಿ, ಪ್ರಕರಣದ ದಾರಿ ತಪ್ಪಿಸಲು ಯತ್ನಿಸುತ್ತಿರಬಹುದು’ ಎಂದರು.
‘ವಿದ್ಯಾರ್ಥಿಗಳ ಪಾಲಕರಿಂದ ಲಕ್ಷಾಂತರ ಶುಲ್ಕ ಪಡೆಯುವ ಶಾಲಾ ಆಡಳಿತ ಮಂಡಳಿಗಳು, ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು. ನೇಹಾ ಕೊಲೆ ಪ್ರಕರಣದಲ್ಲಿ ಕಾಲೇಜಿನ ಭದ್ರತಾ ವೈಫಲ್ಯವೂ ಇದೆ. ಕಾಲೇಜು ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡೋ ವ್ಯಕ್ತಿ ಮೇಲೆ, ಅಪರಿಚಿತರ ಬಗ್ಗೆ ಪೊಲೀಸರು ನಿಗಾ ಇಡುವಂತೆ ಮಾಡಬೇಕು. ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕು. ವಿದ್ಯಾರ್ಥಿಗಳು ಸಹ ಓದುವುದರ ಬಗ್ಗೆ ಗಮನ ಹರಿಸಬೇಕೇ ಹೊರತು, ಪ್ರೀತಿ–ಪ್ರೇಮದ ಬಗ್ಗೆ ಅಲ್ಲ’ ಎಂದು ಹೇಳಿದರು.
ಶಿವಾನಿ ಶೆಟ್ಟಿ, ಸುಶೀಲ ಇಟಗಿ, ಅರುಣ ಅಮರಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.