ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ 21 ಅಧಿಕಾರಿಗಳ ಮೇಲೆ ಶುಕ್ರವಾರ ಬೆಳಿಗ್ಗೆ ದಾಳಿಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), 80 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ 21 ಜನರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಆರೋಪಿತರ ಮನೆ, ಕಚೇರಿಗಳು, ಸಂಬಂಧಿಕರು ಮತ್ತು ನಿಕಟವರ್ತಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಸಂಸ್ಥೆಯ 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗುತ್ತಿದೆ. ಸ್ಥಿರಾಸ್ತಿ ಒಡೆತನ, ಹಣಕಾಸು ವಹಿವಾಟು, ನಗದು, ಬ್ಯಾಂಕ್ ದಾಖಲೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳು:
ಬೆಳಗಾವಿಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಭೀಮರಾವ್ ವೈ. ಪವಾರ್, ಸಣ್ಣ ನೀರಾವರಿ ಇಲಾಖೆಯ ಉಡುಪಿ ವಿಭಾಗದ ಸಹಾಯಕ ಎಂಜಿನಿಯರ್ ಹರೀಶ್, ಹಾಸನ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಕೃಷ್ಣ ಎಚ್.ವಿ., ಕಾರವಾರದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ರಾಜೀವ್ ಪುರಸಯ್ಯ ನಾಯಕ್, ಪೊನ್ನಂಪೇಟೆಯ ಜಿಲ್ಲಾ ಪಂಚಾಯತ್ ವಿಭಾಗದ ಕಿರಿಯ ಎಂಜಿನಿಯರ್ ಬಿ.ಆರ್. ಬೋಪಯ್ಯ, ಬೆಳಗಾವಿಯ ಜಿಲ್ಲಾ ನೋಂದಣಾಧಿಕಾರಿ ಮಧುಸೂದನ್, ಸಣ್ಣ ನೀರಾವರಿ ಇಲಾಖೆಯ ಹೂವಿನಹಡಗಲಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ ಮೇಲೆ ಎಸಿಬಿ ದಾಳಿ ನಡೆಸಿದೆ.
ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಎನ್. ಪಡಸಾಲಿ, ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಪ್ಪ ನಾಗಪ್ಪ ಗೋಗಿ, ಗದಗ ಜಿಲ್ಲೆಯಲ್ಲಿನ ಪಂಚಾಯಿತಿ ಕಾರ್ಯದರ್ಶಿ ಪ್ರದೀಪ್ ಎಸ್. ಆಲೂರು, ಬೆಂಗಳೂರಿನ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ತಿಪ್ಪಣ್ಣ ಪಿ. ಸಿರಸಗಿ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ನಿಯಂತ್ರಕ ಮೃತ್ಯುಂಜ ಚನ್ನಬಸಯ್ಯ ತಿರಣಿ ಮೇಲೂ ತನಿಖಾ ಸಂಸ್ಥೆ ದಾಳಿ ಮಾಡಿದೆ.
ಜಲ ಸಂಪನ್ಮೂಲ ಇಲಾಖೆಯ ಚಿಕ್ಕಬಳ್ಳಾಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಕುಮಾರ್, ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್, ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಮಂಜುನಾಥ್ ಜಿ., ಬಿಡಿಎ ಸಿ ದರ್ಜೆ ನೌಕರ ಶಿವಲಿಂಗಯ್ಯ, ಕೊಪ್ಪಳದ ಪೊಲೀಸ್ ಇನ್‌ಸ್ಪೆಕ್ಟರ್ ಉದಯ ರವಿ, ಕಡೂರು ಪುರಸಭೆಯ ನಿರ್ವಾಹಕ ಬಿ.ಜಿ. ತಿಮ್ಮಯ್ಯ, ರಾಣೆಬೆನ್ನೂರಿನ ನಗರ ಯೋಜನಾ ಕಚೇರಿಯ ಚಂದ್ರಪ್ಪ ಸಿ. ಹೊಲೇಕರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ನಿವೃತ್ತ ಕುಲಸಚಿವ ಜನಾರ್ದನ್ ಮೇಲೆ ಎಸಿಬಿ ದಾಳಿ ನಡೆಸಿದೆ.
ಬೆಳಗಾವಿಯಲ್ಲಿ ಎಸಿಬಿ ದಾಳಿ: ಎಂಜಿನಿಯರ್ ಮನೆಯ ಸ್ನಾನದ ಕೋಣೆಯಲ್ಲಿ ₹5 ಲಕ್ಷ
ಬೆಳಗಾವಿ: ಇಲ್ಲಿನ ಪಿಡಬ್ಲ್ಯುಡಿ ಅಧೀಕ್ಷಕ ಎಂಜಿನಿಯರ್ ಬಿ.ವೈ. ಪವಾರ್ ಅವರ ಮನೆ, ಕಚೇರಿ ಹಾಗೂ ಅವರ ಒಡೆತನದ ಕಾರ್ಖಾನೆ ಮೇಲೆ ಶುಕ್ರವಾರ ಎಸಿಬಿ ತಂಡ ದಾಳಿ ನಡೆಸಿದೆ.
25ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ಈ ತಂಡ ಏಕಕಾಲಕ್ಕೆ ಆರು ಕಡೆ ದಾಳಿ ಮಾಡಿದೆ. ನಗರದ ಜಕ್ಕೇರಿ ಹೊಂಡದಲ್ಲಿರುವ ಪವಾರ್ ಅವರ ಮನೆ, ಖಾಸಗಿ ಕಚೇರಿ ಹಾಗೂ ಸರ್ಕಾರಿ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ, ನಿಪ್ಪಾಣಿ ನಗರದಲ್ಲಿರುವ ಇನ್ನೊಂದು ಮನೆ, ಬೋರಗಾಂವಿನಲ್ಲಿರುವ ಕಾರ್ಖಾನೆ ಮೇಲೂ ದಾಳಿ ಮಾಡಿದ್ದು ತೀವ್ರ ಪರಿಶೀಲನೆ ನಡೆದಿದೆ. ಅವರ ಮನೆಯ ಸ್ನಾನದ ಕೋಣೆಯಲ್ಲಿ ₹5 ಲಕ್ಷ ನಗದು ಪತ್ತೆಯಾಗಿದೆ
ಪವಾರ್ ಅವರು ಇದೇ ಜೂನ್ 30 ರಂದು ನಿವೃತ್ತಿಯಾಗಬೇಕಿದೆ. ನಿವೃತ್ತಿ ಅಂಚಿನಲ್ಲಿದ್ದ ಅವರ ಬಳಿ ಅಪಾರ ಪ್ರಮಾಣದ ಆಸ್ತಿ ಹಾಗೂ ಇತರ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾರವಾರ: ಸಹಾಯಕ ಎಂಜಿನಿಯರ್, ಜಿಲ್ಲಾ ನೊಂದಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಕಾರವಾರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ, ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ) ಅಧಿಕಾರಿಗಳು ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಎರಡು ಕಡೆ ದಾಳಿ ಮಾಡಿದ್ದಾರೆ.
ಕಾರವಾರದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ರಾಜೀವ ನಾಯಕ ಅವರ ಮನೆಗೆ ದಾಳಿ ಮಾಡಿರುವ ಎ.ಸಿ.ಬಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ನಗರದ ಎಂ.ಜಿ.ರಸ್ತೆಯ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಂತೆಯೇ, ಜಿಲ್ಲಾ ನೊಂದಣಾಧಿಕಾರಿ ಶ್ರೀಧರ ಅವರ ಹಬ್ಬುವಾಡದ ಮನೆಯಲ್ಲಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಎರಡೂ ಕಡೆಯ ದಾಳಿಗಳಲ್ಲಿ ಸ್ಥಳೀಯ ಎ.ಸಿ.ಬಿ ಡಿ.ವೈ.ಎಸ್.ಪಿ ಪ್ರಕಾಶ್ ನೇತೃತ್ವದ ತಂಡ ಮತ್ತು ಹುಬ್ಬಳ್ಳಿಯ ಅಧಿಕಾರಿಗಳ ತಂಡ ಭಾಗವಹಿಸಿವೆ.
ಅಜ್ಜಂಪುರ ಪುರಸಭೆ ಕಚೇರಿ ಎಸ್‌ಡಿಎ ತಿಮ್ಮಯ್ಯ ಮನೆಗೆ ಎಸಿಬಿ ತಂಡ ದಾಳಿ
ಚಿಕ್ಕಮಗಳೂರು: ಆದಾಯಕ್ಕಿಂಯ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಅಜ್ಜಂಪುರ ಪುರಸಭೆ ಕಿರಿಯ ಸಹಾಯಕ ಬಿ.ಜಿ.ತಿಮಯ್ಯ ಅವರ ಮನೆ, ಕಚೇರಿಯಲ್ಲಿ ಎಸಿಬಿ ತಂಡ ಪರಿಶೀಲನೆಯಲ್ಲಿ ತೊಡಗಿದೆ.
ಅಜ್ಜಂಪುರ ಸಭೆ ಕಚೇರಿ, ಕಡೂರಿನಲ್ಲಿ ಅವರ ನಿವಾಸ, ಬಾಸೂರಿನಲ್ಲಿನ ಮನೆಯಲ್ಲಿ ತಲಾಶ್ ಮುಂದುವರಿದಿದೆ. ಚಿನ್ನ, ಬೆಳ್ಳಿ ಆಭರಣ, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಗಂಗಾವತಿ: ಪೊಲೀಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಗಂಗಾವತಿ (ಕೊಪ್ಪಳ): ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಗುಪ್ತಚರ ಇಲಾಖೆ ಅಧಿಕಾರಿ ಉದಯರವಿ ಅವರ ಮನೆ ಮೇಲೆ ಶುಕ್ರವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಚೆಗೆ ಉದಯರವಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಗುಪ್ತಚರ ಇಲಾಖೆಗೆ ವರ್ಗಾವಣೆ ಆಗಿದ್ದರು.
ವರ್ಗಾವಣೆಗೂ ಮುನ್ನ ಉದಯ ರವಿ ಮೇಲೆ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಮಟ್ಕಾ, ಇಸ್ಪೀಟ್ ದಂಧೆ ಹಾಗೂ ಮರಳು ಮಾಫಿಯಾದಲ್ಲಿ ಅಧಿಕಾರಿ ಭಾಗಿಯಾಗಿದ್ದಾರೆ ಎಂದು
ಆರೋಪಿಸಿದ್ದರು. ಈಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ ಪೊಲೀಸ್ ಮಹಾನಿರ್ದೇಶಕರಿಗೆ ಈ ಕುರಿತು ದೂರು ಸಲ್ಲಿಸಿ, ತನಿಖೆ ನಡೆಸಲು ಮನವಿ ಮಾಡಿದ್ದರು.
ಎಸಿಬಿ ಡಿವೈಎಸ್ಪಿ ಶಿವ ಕುಮಾರ್ ನೇತೃತ್ವದ ತಂಡ ದಾಳಿ ಮಾಡಿದೆ. ರವಿ ಅವರ ನಾಲ್ಕು ಮನೆಗಳಲ್ಲಿ ಎಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಮನೆಗಳ ಮೇಲೆ ಎಸಿಬಿ ದಾಳಿ
ರಾಮನಗರ: ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನೋಂದಣಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಿ.ಎಸ್. ಶ್ರೀಧರ್ ಅವರಿಗೆ ಸೇರಿದ ಕಚೇರಿ, ನಿವಾಸಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕಾರವಾರದಲ್ಲಿನ ನಿವಾಸ, ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿರುವ ನಿವಾಸ, ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ಸೇರಿದಂತೆ ಒಟ್ಟು ಐದು ಕಡೆ ಅಧಿಕಾರಿಗಳ ನೇತೃತ್ವದ ತಂಡವು ದಾಳಿ ಮಾಡಿದೆ.
ಶ್ರೀಧರ್ ಇದಕ್ಕೂ ಮುನ್ನ ರಾಮನಗರ ಜಿಲ್ಲೆಯಲ್ಲಿ ಡಿ.ಆರ್. ಆಗಿ ಕಾರ್ಯ ನಿರ್ವಹಿಸಿದ್ದು, ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಐವರು ಡಿವೈಎಸ್ಪಿ ನೇತೃತ್ವದ ತಂಡಗಳು ದಾಳಿ ನಡೆಸಿವೆ. ವಿವಿಧ ಆಸ್ತಿಪತ್ರಗಳ ಜೊತೆಗೆ ಲಾಕರ್ ನಲ್ಲಿ ಚಿನ್ನ ಪತ್ತೆಯಾಗಿದ್ದು, ಶೋಧ ಮುಂದುವರಿದಿದೆ.
ಬಾಗಲಕೋಟೆ: ಯೋಜನಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಬಾಗಲಕೋಟೆ: ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮನೆ ಮೇಲೆ ಶುಕ್ರವಾರ ದಾಳಿ ನಡೆದಿದೆ.
ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ನವನಗರದ 55ನೇ ಸೆಕ್ಟರ್‌ನಲ್ಲಿರುವ ಯೋಜನಾಧಿಕಾರಿ ಶಂಕರಲಿಂಗೇಗೌಡ ಅವರ ಮನೆ ಮೇಲೆ ದಾಳಿ ಮಾಡಿದೆ.
ವಿದ್ಯಾಗಿರಿಯಲ್ಲಿರುವ ನಿರ್ಮಿತಿ ಕೇಂದ್ರದ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಇಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ದಾಳಿ ಮಾಡಲಾಗಿದೆ. ನವನಗರದ 58ನೇ ಸೆಕ್ಟರ್‌ನಲ್ಲಿ ಮನೆಯಿದೆ. ಅವರಿಗೆ ಸೇರಿದ ಧಾರವಾಡದಲ್ಲಿರುವ ಮನೆ ಮೇಲೂ ದಾಳಿ ನಡೆಸಲಾಗಿದೆ.
ಕೊಡಗು: ಕಿರಿಯ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ
ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೊನ್ನಂಪೇಟೆ ವಿಭಾಗದ ಕಿರಿಯ ಎಂಜಿನಿಯರ್ ಓಬಯ್ಯ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದ ಪೊನ್ನಂಪೇಟೆಯ ಕಚೇರಿ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಅವರ ನಿವಾಸ, ಎರಡು ತೋಟದ ಮನೆಗಳು, ಅವರ ಸೋದರ ವಾಸವಿರುವ ಮೈಸೂರು ನಗರದ ಕುಕ್ಕರಹಳ್ಳಿಯ ನಿವಾಸದ ಮೇಲೆ 29 ಮಂದಿಯ ಎಸಿಬಿ ತಂಡವು ಬೆಳಿಗ್ಗೆ 5.45ಕ್ಕೆ ದಾಳಿ ನಡೆಸಿ, ದಾಖಲಾತಿಗಳು, ಹಣ, ಚಿನ್ನಾಭರಣಗಳ ಪರಿಶೀಲನಾ ಕಾರ್ಯ ನಡೆಸಿದೆ.
'ಎಲ್ಲ ಬಗೆಯ ತಪಾಸಣೆ ಮುಗಿದ ನಂತರವಷ್ಟೇ ವಿವರ ಖಚಿತವಾಗಿ ಹೇಳಲು ಸಾಧ್ಯ. ಸದ್ಯ ಎಲ್ಲೆಡೆ ತಪಾಸಣೆ ನಡೆದಿದೆ' ಎಂದು ಎಸಿಬಿಯ ಕೊಡಗು ಜಿಲ್ಲಾ ಡಿವೈಎಸ್ಪಿ ರಾಜೇಂದ್ರ ಪ್ರಜಾವಾಣಿಗೆ ತಿಳಿಸಿದರು.
ಎಸಿಬಿಯ ಮೈಸೂರು ವಿಭಾಗದ ಎಸ್.ಪಿ.ಸಜಿತ್ ನೇತೃತ್ವದಲ್ಲಿ ಡಿವೈಎಸ್ಪಿ ರಾಜೇಂದ್ರ, ಸದಾನಂದ ತಿಪ್ಪಣ್ಣನವರ, ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಕುಮಾರ್, ಚಿತ್ತರಂಜನ್, ಲಕ್ಷ್ಮೀಕಾಂತ ಸೇರಿದಂತೆ ಒಟ್ಟು 29 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
ಹಾಸನ: ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮನೆಯಲ್ಲಿ ಎಸಿಬಿ ದಾಖಲೆ ಪರಿಶೀಲನೆ
ಹಾಸನ: ಸಣ್ಣ ನೀರಾವರಿ ಇಲಾಖೆ ಎಇಇ ರಾಮಕೃಷ್ಣ ಮನೆ ಮೇಲೆ ಶುಕ್ರವಾರ ಮುಂಜಾನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಮಕೃಷ್ಣಗೆ ಸೇರಿದೆ ಮನೆ, ಆಫೀಸ್ ಸೇರಿ ಮೂರು ಕಡೆ ದಾಳಿ ನಡೆಸಲಾಗಿದೆ. ಹಾಸನದ ವಿದ್ಯಾನಗರದಲ್ಲಿರುವ ನಿವಾಸ, ಹಿರಿಸಾವೆ ನಿವಾಸ ಹಾಗೂ ಕುವೆಂಪು ನಗರದಲ್ಲಿರುವ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ರಾಮಕೃಷ್ಣ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಎಸಿಬಿ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಮೂರು ತಂಡಗಳು ಏಕಕಾಲದಲ್ಲಿಮೂರು ಕಡೆ ದಾಳಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.