ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅನ್ನು ಕಲೆಕ್ಷನ್ ಬ್ಯೂರೋ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಎಸಿಬಿ ಅನ್ನು ನಾವೇ ಹುಟ್ಟುಹಾಕಿದ್ದು ನಿಜ. ಆದರೆ, ಅದನ್ನು ದುರ್ಬಳಕೆ ಮಾಡಿಕೊಂಡು ನಮ್ಮ ರಾಜಕೀಯ ವಿರೋಧಿಗಳನ್ನು ಮಣಿಸಲು ರಾಜಕೀಯ ಅಸ್ತ್ರವನ್ನಾಗಿ ಮಾಡಿರಲಿಲ್ಲ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಿಎಸ್‌ಐ ಹಗರಣ ಮತ್ತು ಎಸಿಬಿ ದಾಳಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇದೆ. ರಾಜಸ್ಥಾನ, ಗುಜರಾತ್‌ನಲ್ಲಿ ಇಲ್ಲವಾ? ಅದನ್ನು ದುರ್ಬಳಕೆ ಮಾಡಿಕೊಂಡರೆ ಸರ್ಕಾರದ ತಪ್ಪಾಗುತ್ತದೆ. ಅದಕ್ಕೆ ಹಿಂದಿನ ಸರ್ಕಾರಗಳು ಹೊಣೆಯಾಗುವುದಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಹಿಂದಿನ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದು ಸಣ್ಣತನ ಮಾತ್ರವಲ್ಲ ನೀಚತನವೂ ಹೌದು. ನಮ್ಮ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದ್ದರೆ ಆಗ ತನಿಖೆಗೆ ಒತ್ತಾಯ ಮಾಡಬೇಕಿತ್ತು. ಆಗ ಸುಮ್ಮನಿದ್ದು ಈಗ ಎಲ್ಲಾ ಕಾಲದಲ್ಲೂ ಹಗರಣ ನಡೆದಿದೆ ಎಂದು ಹೇಳಿ ತಪ್ಪಿಸಿಕೊಳ್ಳೋಕೆ ಆಗಲ್ಲ’ ಎಂದು ಕಿಡಿಕಾರಿದ್ದಾರೆ.
‘ಈ ಹಿಂದಿನ ಎಫ್‌ಡಿಎ, ತೋಟಗಾರಿಕೆ, ಪಶು ಸಂಗೋಪನೆ, ಲೋಕೋಪಯೋಗಿ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯೂ ನ್ಯಾಯಬದ್ಧವಾಗಿ, ಕ್ರಮಬದ್ಧವಾಗಿ ನಡೆದಿಲ್ಲ ಎಂಬ ಆರೋಪವಿದೆ. ಇವುಗಳನ್ನು ಸೇರಿಸಿಕೊಂಡು ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಪಿಎಸ್‌ಐ ನೇಮಕಾತಿಯಲ್ಲಿ 300 ಜನರ ಓಎಮ್‌ಆರ್ ಶೀಟ್‌ಗಳನ್ನು ತಿದ್ದಲಾಗಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ 30 ಲಕ್ಷದಿಂದ ₹1 ಕೋಟಿವರೆಗೂ ವಸೂಲಿ ಮಾಡಲಾಗಿದೆ. ಈ ಹಣ ಬಿಜೆಪಿ ಪಕ್ಷದ ಯಾವ ಮಂತ್ರಿಗೆ ಹೋಗಿದೆ? ಸಿಎಂ ಬೊಮ್ಮಾಯಿಗೆ ಹೋಗಿದೆಯಾ ಇಲ್ಲವಾ? ಇವೆಲ್ಲ ಗೊತ್ತಾಗಬೇಕಾದರೆ ನ್ಯಾಯಾಂಗ ತನಿಖೆ ನಡೆಯಲೇಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
‘ಪಿಎಸ್‌ಐ ನೇಮಕಾತಿಯಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರ ಕಡೆಯ 5 ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಅವರ ಸಂಬಂಧಿಕರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಸಿಐಡಿಯಿಂದ ಈ ಹಗರಣಗಳ ನಿಷ್ಪಕ್ಷಪಾತ ತನಿಖೆ ಸಾಧ್ಯವೇ? ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಗೆ ಬರಬಹುದು’ ಎಂದು ತಿಳಿಸಿದ್ದಾರೆ.
‘ಜಿಲ್ಲಾಧಿಕಾರಿ ಮಂಜುನಾಥ್ ಬಂಧನದ ಪ್ರಕರಣದಲ್ಲಿ ತಮ್ಮನ್ನು ಯಾರೋ ಬೆದರಿಸಿದ್ದಾರೆ ಎಂದು ನ್ಯಾಯಮೂರ್ತಿಗಳೇ ಖುದ್ದಾಗಿ ವಿಚಾರಣೆ ಕಾಲದಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿಗಳನ್ನೇ ಬೆದರಿಸುವಷ್ಟು ಶಕ್ತಿಶಾಲಿ ವ್ಯಕ್ತಿ ಯಾರು? ಆ ವ್ಯಕ್ತಿಗೂ, ಸರ್ಕಾರಕ್ಕೂ ನೇರವಾದ ಸಂಬಂಧ ಇದೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಆರಗ ಜ್ಞಾನೇಂದ್ರ ಅವರು ತಮ್ಮ ಮಾತು ಮತ್ತು ನಡವಳಿಕೆಗಳಿಂದ ತಾವೊಬ್ಬ ಬೇಜವಾಬ್ದಾರಿ ಸಚಿವ ಎಂದು ಸಾಬೀತು ಪಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದಿದ್ದ ಕೋಮು ಘರ್ಷಣೆ, ಮೈಸೂರಿನಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳಲ್ಲಿ ಗೃಹ ಸಚಿವರ ಸುಳ್ಳು ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಇಂಥವರು ಗೃಹ ಸಚಿವರಾಗಲು ಲಾಯಕಿಲ್ಲ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
‘ಪಿಎಸ್ಐ ನೇಮಕಾತಿ ಹಗರಣದ ತನಿಖೆಗೆ ಕಳೆದ ಮಾರ್ಚ್ ತಿಂಗಳಿನಿಂದ ನಾವು ಒತ್ತಾಯಿಸುತ್ತಾ ಬಂದಿದ್ದೇವೆ. ಈ ಹಗರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಸಿಎಂ ಬೊಮ್ಮಾಯಿ ಅವರಿಗೆ 2022ರ ಮೇ 26ರಂದು ಪತ್ರ ಬರೆದಿದ್ದೆ. ಈಗಲೂ ನಮ್ಮದು ಇದೇ ಒತ್ತಾಯ’ ಎಂದಿದ್ದಾರೆ.
ಪಿಎಸ್ಐ ನೇಮಕಾತಿ ಉಸ್ತುವಾರಿ ವಹಿಸಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನೇ ಈಗ ಬಂಧಿಸಲಾಗಿದೆ. ಈ ಹಗರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಯಾವ ಭ್ರಷ್ಟಾಚಾರವೂ ನಡೆದಿಲ್ಲ ಎಂದು ವಾದಿಸಿದ್ದ ಸಿಎಂ ಬೊಮ್ಮಾಯಿ, ಗೃಹಸಚಿವರು ಈಗೇನು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಅಶ್ವತ್ಥನಾರಾಯಣ ಸಂಬಂಧಿಕರು ಅಂಕಗಳನ್ನು ತಿದ್ದಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಿದ್ದಾಗ ಸಿಐಡಿ ತನಿಖೆಯಿಂದ ಯಾವ ನ್ಯಾಯ ಸಿಗಲು ಸಾಧ್ಯ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.