ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಇಬ್ಬರು ನಿವೃತ್ತರೂ ಸೇರಿದಂತೆ 21 ಅಧಿಕಾರಿಗಳಿಗೆ ಸಂಬಂಧಿಸಿದ 80 ಸ್ಥಳಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿಮಾಡಿ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ),₹1.92 ಕೋಟಿ ನಗದು ಮತ್ತು 13 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡಿದೆ.
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆದಿದ್ದು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರರು ಭಾರಿ ಪ್ರಮಾಣದ ಆಸ್ತಿ ಹೊಂದಿರುವುದನ್ನು ಪತ್ತೆಮಾಡಿದ್ದಾರೆ. ಕೆಲವು ಅಧಿಕಾರಿಗಳು ಬೆಂಗಳೂರು ಸೇರಿದಂತೆ ವಿವಿಧ ನಗರಗಳ ವ್ಯಾಪ್ತಿಯಲ್ಲಿ ಬಹುಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿರುವ ದಾಖಲೆಗಳನ್ನು ತನಿಖಾ ತಂಡ ಪತ್ತೆಹಚ್ಚಿದೆ.
ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆಯಲ್ಲಿ ಬರೋಬ್ಬರಿ ₹ 62 ಲಕ್ಷ ನಗದು ಪತ್ತೆಯಾಗಿದೆ. 30 ಲೀಟರ್‌ನಷ್ಟು ಮದ್ಯದ ಬಾಟಲಿಗಳನ್ನೂ ಇವರ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯಕ ಮಹಾನಿರೀಕ್ಷಕ ಮಧುಸೂದನ್ ವಿ. ಮನೆಯಲ್ಲಿ ₹ 39 ಲಕ್ಷ ನಗದನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಚಿಕ್ಕಬಳ್ಳಾಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎ. ಮೋಹನ್ ಕುಮಾರ್ ಮನೆಯಲ್ಲಿ ₹ 13.50 ಲಕ್ಷ ನಗದು ಸಿಕ್ಕಿದೆ.ಇವರು ಇವರು ಬೆಂಗಳೂರು ನಗರದಲ್ಲೇ ಹತ್ತು ಸ್ಥಿರಾಸ್ತಿಗಳನ್ನು ಹೊಂದಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆಮಾಡಿದ್ದಾರೆ.
ಶೌಚಾಲಯದಲ್ಲಿ ಹಣ: ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜನಿಯರ್ ಭೀಮರಾವ್ ಯಶವಂತ ಪವಾರ ಮನೆಯಲ್ಲಿ ₹ 8.50 ಲಕ್ಷ ನಗದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಶೋಧಕ್ಕಾಗಿ ಮನೆಯ ಬಾಗಿಲು ಬಡಿಯುತ್ತಿದ್ದಂತೆ ₹ 5 ಲಕ್ಷ ನಗದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಶೌಚಾಲಯದಲ್ಲಿ ಅವಿತಿಟ್ಟಿದ್ದರು. ಅದನ್ನೂ ತನಿಖಾ ತಂಡ ಪತ್ತೆಮಾಡಿದೆ.
ಸದ್ಯ ಅಮಾನತ್ತಿನಲ್ಲಿರುವ ಪೊಲೀಸ್ ಇನ್‌ಸ್ಪೆಕ್ಟರ್ ಉದಯ ರವಿ (ಹಿಂದೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ) ಮನೆಯಲ್ಲಿ ₹ 13.96 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ನಿವೃತ್ತಿ ಬಳಿಕ ದಿಢೀರ್ ಮೇಲೇರಿದ ಆಸ್ತಿ!
ಬೆಂಗಳೂರು: ಲೋಕೋಪಯೋಗಿ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಮಂಜುನಾಥ ಜಿ. 2018ರಲ್ಲಿ ನಿವೃತ್ತರಾಗಿದ್ದು, ಆ ಬಳಿಕ ಭಾರಿ ಪ್ರಮಾಣದ ಆಸ್ತಿ ಖರೀದಿಸಿರುವುದನ್ನು ಎಸಿಬಿ ಅಧಿಕಾರಿಗಳು ಶುಕ್ರವಾರ ಪತ್ತೆಮಾಡಿದ್ದಾರೆ.
ಬೆಂಗಳೂರು ನಗರದ ಬಸವೇಶ್ವರ ನಗರ ಮತ್ತು ರಾಜಾಜಿನಗರದಲ್ಲಿ ತಲಾ ಒಂದು ಮನೆ, ಜಯನಗರ ಹಾಗೂ ನಾಗವಾರದಲ್ಲಿ ತಲಾ ಒಂದು ವಾಣಿಜ್ಯ ಸಂಕೀರ್ಣ, ಎರಡು ಫ್ಲ್ಯಾಟ್ ಸೇರಿದಂತೆ ಹಲವು ಸ್ಥಿರಾಸ್ತಿಗಳು ಇವರ ಕುಟುಂಬದ ಬಳಿ ಪತ್ತೆಯಾಗಿವೆ. ಪತ್ನಿ, ಮಗಳ ಹೆಸರಿನಲ್ಲೂ ಆಸ್ತಿ ಖರೀದಿಸಿರುವ ದಾಖಲೆಗಳು ತನಿಖಾ ತಂಡಕ್ಕೆ ಲಭಿಸಿವೆ.
‘ನಿವೃತ್ತ ಅಧಿಕಾರಿ ಮಂಜುನಾಥ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳನ್ನು ಎಸಿಬಿ ಸೇರಿದಂತೆ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಂದಾಯ ಸಚಿವರ ಹಣಕ್ಕಾಗಿ ಒತ್ತಾಯಿಸುತ್ತಾರೆ. ಶಾಸಕರ ಭವನವನ್ನು ಈ ಕೆಲಸಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಬಾಗಲಕೋಟೆಯ ಗುಳೇದಗುಡ್ಡ ತಾಲ್ಲೂಕಿನ ಹೊಳೆಬಸಪ್ಪ ಹಾಳಕೇರಿ ಎಂಬ ವಕೀಲರು ಫೆಬ್ರುವರಿಯಲ್ಲಿ ಎಸಿಬಿಗೆ ದೂರು ನೀಡಿದ್ದರು. ಅದರ ಆಧಾರದಲ್ಲೇ ತನಿಖೆ ಆರಂಭಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಸದ್ಯ, ಮಂಜುನಾಥ್ ಬಳಿ ಹತ್ತಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿವೆ. ನಿವೃತ್ತಿ ಸಂದರ್ಭದಲ್ಲಿನ ಅವರ ಹಣಕಾಸು ಸ್ಥಿತಿ ಮತ್ತು ನಂತರದಲ್ಲಿ ನಡೆಸಿರುವ ವಹಿವಾಟುಗಳ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಬಿಡಿಎ ಉದ್ಯಾನ ಸಿಬ್ಬಂದಿ ಬಹುಕೋಟಿ ಒಡೆಯ!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉದ್ಯಾನ ನಿರ್ವಹಣಾ ಸಿಬ್ಬಂದಿಯಾಗಿರುವ ಶಿವಲಿಂಗಯ್ಯ ನಗರದಲ್ಲಿ ನಾಲ್ಕು ಮನೆ, ಒಂದು ನಿವೇಶನ, ಚನ್ನಪಟ್ಟಣದಲ್ಲಿ 1 ಎಕರೆ 9 ಗುಂಟೆ ಕೃಷಿ ಜಮೀನು ಸೇರಿದಂತೆ ಬಹು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದನ್ನು ಎಸಿಬಿ ಪತ್ತೆಮಾಡಿದೆ.
ಪ್ರಸ್ತುತ ಬಿಡಿಎ ಬನಶಂಕರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಶಿವಲಿಂಗಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮನೆಯಲ್ಲಿ ಮೂರು ಕಾರು, ಎರಡು ದ್ವಿಚಕ್ರ ವಾಹನಗಳೂ ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.