ಕಾರವಾರ: ಯಲ್ಲಾಪುರ ತಾಲ್ಲೂಕಿನ ಕಿರುವತ್ತಿಯಲ್ಲಿ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಅವರ ಹಾಗೂ ಸಂಬಂಧಿಕರ ಮನೆಗಳ ಮೇಲೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಅವರ ನೇತೃತ್ವದ ಆರು ತಂಡಗಳು ಏಕಕಾಲಕ್ಕೆ ವಿವಿಧೆಡೆ ಪರಿಶೀಲನೆ ಮಾಡಿವೆ. ಉತ್ತರಕನ್ನಡ, ಮಂಗಳೂರು, ಉಡುಪಿ, ಗದಗ, ಧಾರವಾಡ ಮತ್ತು ಚಿಕ್ಕಮಗಳೂರಿನ ಅಧಿಕಾರಿಗಳು ಈ ತಂಡದಲ್ಲಿದ್ದರು.
ಕಿರುವತ್ತಿಯಲ್ಲಿರುವ ಕಚೇರಿ ಮತ್ತು ವಲಯ ಅರಣ್ಯಾಧಿಕಾರಿಯ ಸರ್ಕಾರಿ ವಸತಿ ಗೃಹ, ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಹೋಬಳಿಯ ಸಕಲಬೇಣದಲ್ಲಿರುವ ಮೂಲಮನೆ, ಕಾರವಾರದ ಕಾಜುಬಾಗದ ಮಾಳಸವಾಡಾದಲ್ಲಿರುವ ಮಗಳ ಮನೆ, ಕಾರವಾರ ತಾಲ್ಲೂಕಿನ ಮಾಜಾಳಿಯ ಕೊಠಾರಾದಲ್ಲಿರುವ ಅವರ ಅತ್ತೆ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ಚಂದ್ರಕಾಂತ ನಾಯ್ಕ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಕುರಿತು ವ್ಯಕ್ತಿಯೊಬ್ಬರು ಎಸಿಬಿಗೆ ನೀಡಿದ ದೂರಿನ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಬೇಲೆಕೇರಿಯಲ್ಲಿ ಅದಿರು ನಾಪತ್ತೆ ಪ್ರಕರಣದಲ್ಲಿ ಚಂದ್ರಕಾಂತ ನಾಯ್ಕ ಜೈಲು ಶಿಕ್ಷೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.